ಮತದಾನದ ಮೂಲಕ ಪ್ರಜಾಪ್ರಭುತ್ವದ ಅಡಿಗಲ್ಲು ಗಟ್ಟಿಯಾಗಲಿ: ಡಾ.ಯುವರಾಜ ಹನಗಂಡಿ

ಸಮಗ್ರ ಪ್ರಭ ಸುದ್ದಿ
2 Min Read

 

  • ಕರ್ನಾಟಕದ ನಕಾಶೆಯನ್ನು ನೆಲದ ಮೇಲೆ ಬಿಡಿಸಿ ಅದರ ಪಕ್ಕದಲ್ಲಿ ನಮ್ಮ ಮತ ನಮ್ಮ ಹಕ್ಕು, ಮೇ 10 ಪ್ರಜಾಪ್ರಭುತ್ವದ ಹಬ್ಬ ಎಂದು ಬರೆದಿದ್ದು ಗಮನ ಸೆಳೆಯಿತು. ಕಾರ್ಯಕ್ರಮದ ನಂತರ ಮತದಾನ ಪ್ರತಿಜ್ಞಾ ವಿಧಿ ಬೋಧಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.

ಮುಂಡರಗಿ : ವಿಶ್ವದ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರ ಭಾರತ‌. ಅಂತಹ ರಾಷ್ಟ್ರದ ಭಾಗವಾದ ಕರ್ನಾಟಕದಲ್ಲಿ ಮೇ 10 ರಂದು ಪ್ರಜಾಪ್ರಭುತ್ವದ ದೊಡ್ಡ ಹಬ್ಬ ನಡೆಯಲಿದೆ. ಅಂದು ಎಲ್ಲರೂ ತಪ್ಪದೇ ಮತದಾನ ಮಾಡುವ ಮೂಲಕ ಅದರ ಅಡಿಗಲ್ಲನ್ನು ಗಟ್ಟಿಗೊಳಿಸಬೇಕು ಎಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಡಾ.ಯುವರಾಜ ಹನಗಂಡಿ ಹೇಳಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ಮತದಾನ ಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚುನಾವಣಾ ಆಯೋಗ ಭಾರತದ ದೊಡ್ಡ ಆಧಾರ ಸ್ತಂಭ. ಅದರ ನಿರ್ದೇಶನದಂತೆ ಚುನಾವಣೆ ನಡೆಯುತ್ತಿದೆ. ಹೆಚ್ಚಿನ ಮತದಾನ ಮಾಡುವ ಮೂಲಕ ನಾವು ಜವಾಬ್ದಾರರಾಗಬೇಕಿದೆ ಎಂದರು‌‌.

ಇದೇ ವೇಳೆ ಮಾತನಾಡಿದ ಸಭೆಯ ಉಸ್ತುವಾರಿ ಎಂ.ಎಸ್.ಕೊರ್ಲಹಳ್ಳಿ ಅವರು ಚುನಾವಣೆ ದೊಡ್ಡ ಹಬ್ಬ. ಅರ್ಹ ಮತದಾರರು ಕಡ್ಡಾಯ ಮತದಾನದ ಅದನ್ನು ಸಂಭ್ರಮಿಸಿ ಜವಾಬ್ದಾರಿ ಮೆರೆಯಬೇಕು ಎಂದರು. ಬೃಂದಾವನ ಸರ್ಕಲ್ ಮೂಲಕ ಹಾಗೂ ಕೊಪ್ಪಳ ಕ್ರಾಸ್ ವರೆಗೂ ಕಾಲ್ನಡಿಗೆ ಜಾಥಾ ನಡೆಸಿ, ಎರಡೂ ವೃತ್ತಗಳಲ್ಲಿ ಮಾನವ ಸರಪಳಿ ನಿರ್ಮಿಸಿ ಕಡ್ಡಾಯ ಮತದಾನದ ಘೋಷಣೆಗಳನ್ನು ಕೂಗಲಾಯಿತು.

ಜಿಲ್ಲಾ ಪಂಚಾಯತಿ ಸಹಾಯಕ ನಿರ್ದೇಶಕ (ಆಡಳಿತ) ಎಸ್.ಕೆ.ಇನಾಂದಾರ್, ಪುರಸಭೆ ಮುಖ್ಯಾಧಿಕಾರಿ ಎಂ.ಎ. ನೂರುಲ್ಲಾಖಾನ್, ಬಿಇಒ ಎಂ.ಎಫ್.ಬಾರ್ಕಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಬಸವರಾಜ ಬಳ್ಳಾರಿ, ಬಿಆರ್ ಸಿ ಸಂಯೋಜಕ ಗಂಗಾಧರ ಅಣ್ಣಿಗೇರಿ, ಪ್ರಾಂಶುಪಾಲ ಎಸ್.ಆರ್.ಚಿಗರಿ, ಅಬಕಾರಿ ಸಬ್ ಇನ್ಸಪೆಕ್ಟರ್ ಆಶಾರಾಣಿ ಗುಡದರ ಉಪಸ್ಥಿತರಿದ್ದರು.

ಮತದಾನ ಜಾಗೃತಿ ಸಭೆಯಲ್ಲಿ ತಾಪಂ ಸಿಬ್ಬಂದಿ, ಪುರಸಭೆ ನೌಕರರು, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಹಿನ್ನಲೆ ಮತದಾರಿಗೆ ಮತದಾನದ ಜಾಗೃತಿಗಾಗಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಜಿಲ್ಲೆಯಾದ್ಯಂತ ಏಕಕಾಲಕ್ಕೆ ಒಂದು ಲಕ್ಷ ಮತದಾರರ ಪ್ರತಿಜ್ಞಾ ವಿಧಿ ಬೋಧಿಸುವ ಮೂಲಕ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನಲೆ ಮುಂಡರಗಿ ಪಟ್ಟಣ ಹಾಗೂ ತಾಲೂಕಿನ ಪ್ರತಿ ಗ್ರಾಮ ಪಂಚಾಯತಿಯಲ್ಲೂ ಮತದಾನ ಜಾಗೃತಿಗಾಗಿ ವಿಭಿನ್ನ ವಾಗಿರುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಮತ್ತು ಪ್ರತಿಜ್ಞಾ ವಿಧಿ ಭೋದಿಸಲಾಯಿತು.

Share this Article