ರೋಣ :- ಒಂದೆ ಕೈ ಐತಿ ಅಂತಾ ಕೆಲಸ ಮಾಡೋದು ಬಿಟ್ಟರೆ ಹೊಟ್ಟೆ ಪಾಡು ನಡೆಯೋದು ಬಾಳ ಕಷ್ಟ ಐತ್ರಿ, ನಾನು ಒಬ್ಬನೇ ಆಗಿದ್ದರೆ ಎನರ ಮಾಡಿ ಬದುಕಬಹುದು ತಂದೆ, ತಾಯಿ,ಅಜ್ಜ, ಹೆಂಡತಿ ಅದಾರ ಅವರ ಕಟಕೊಂಡು ಇರೋ ಒಂದು ಕೈಯಿಂದ ನಮ್ಮ ಸಂಸಾರ ನಡೆಸಿ ಕೊಂಡು ಹೊಂಟಿನಿ ಅದಕ್ಕ ಸಹಾಯ ಆಗಿದ್ದು ಉದ್ಯೋಗ ಖಾತ್ರಿ ಯೋಜನೆ.
ರೋಣ ತಾಲೂಕಿನ ಬೆಳವಣಕಿ ಗ್ರಾಮದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನಡೆದ ಸಮುದಾಯ ಕಾಮಗಾರಿ ವೇಳೆ ಕೆಲಸ ಮಾಡೋವಾಗ ಗಣೇಶ ಮೇದಾರ. (25)ಅವರನ್ನು ಮಾತನಾಡಿಸಿದಾಗ ಹೇಳಿದ ಮಾತುಗಳು ಇವು
ಹೌದು ಒಂದು ಕೈಯಿಂದಲೇ ಉಳಿದವರಿಗಿಂತ ಹೆಚ್ಚು ಕೆಲಸ ಮಾಡಿ ತನ್ನ ಅಂಗ ವಿಕಲತೆ ಮೆಟ್ಟಿ ನಿಂತು ಇತರರಿಗೆ ಮಾದರಿ ಆಗಿದ್ದಾನೆ. ಹುಟ್ಟುತಾ ವಿಕಲಚೇತನ ಆಗಿದ್ದು! ತಂದೆ ತಾಯಿಗೆ ಇವನೊಬ್ಬನೇ ಮಗ. ಗ್ರಹಣದ ಕಾರಣದಿಂದ ಹುಟ್ಟಿನಿಂದಲೇ ಒಂದೆ ಕೈ ಇದೆ ಅಂತೆ. ಅದರಿಂದಲೇ ಬೆಳವಣಿಗೆಯು ಸಹ ಕುಂಟಿತವಾಗಿದೆ. ಈ ವಿಕಲತೆಯನ್ನು ಮೀರಿ ಉಳಿದ ಸಮಯದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಗಣೇಶನಿಗೆ, ನರೇಗಾದಲ್ಲಿ ಕೆಲಸ ಮಾಡುವ ಮೂಲಕ ಜೀವನ ಚನ್ನಾಗಿ ನಡೆದಿದೆ. ಪ್ರತಿ ವರ್ಷ ಬೇಸಿಗೆಯಲ್ಲಿ ಉದ್ಯೋಗ ಖಾತ್ರಿ ಆಸರೆ ಆಗುತ್ತೆ ಅಂತಾನೆ ಈ ಗಣೇಶ.
ನಮ್ಮ ಕುಟುಂಬದಲ್ಲಿ ನಾನು,ಹೆಂಡತಿ, ಅಪ್ಪ, ಅವ್ವ, ಅಜ್ಜ ಇದ್ದೇವಿ. ಅಜ್ಜನಿಗೆ ದೊಡ್ಡ ಖಾಯಿಲೆ ಇದೆ, ಕುಟುಂಬದ ನಿರ್ವಹಣೆ ಕಷ್ಟವಾದ ಕಾರಣ ಇಳಿ ವಯಸ್ಸಿನಲ್ಲಿಯೂ ಸಹ ತಂದೆ, ತಾಯಿಯನ್ನು ಕರೆದುಕೊಂಡು ಉದ್ಯೋಗ ಖಾತ್ರಿ ಕೆಲಸಕ್ಕೆ ಬರುತ್ತೇನೆ. ಸ್ವಾಭಿಮಾನ ದಿಂದ ಬದುಕಬೇಕು ಎನ್ನುವ ಹಂಬಲವಿದೆ. ನನಗೆ ವಿಕಲತೆ ಇದೆ ಅಂತಾ ಕೈಲಾಗದ ಹಾಗೆ ಬದುಕಿದರೆ ಬದುಕಿಗೆ ಬೆಲೆ ಎಲ್ಲಿಂದ ಬರೋಕೆ ಸಾಧ್ಯ ಅಂತಾ ನಮ್ಮನ್ನೆ ಪ್ರಶ್ನೆ ಮಾಡ್ತಾನೆ ಗಣೇಶ.
ನರೇಗಾದಲ್ಲಿ ಕೆಲಸ ಮಾಡುವ BFT ಪ್ರಕಾಶ ತಳವಾರ ಬಾಳ ಪರಿಚಯ ಅವರು ನನಗೆ ಹೇಳಿದರು ನರೇಗಾದಲ್ಲಿ ಅಂಗವಿಕಲರು ಸಹ ಕೆಲಸ ಮಾಡಬಹುದು, ಕೆಲಸದಲ್ಲಿ ಶೇ.50 ರಿಯಾಯತಿ ಜೊತೆಗೆ ಪೂರ್ಣ ಪ್ರಮಾಣದ ಕೂಲಿಯೂ ದೊರೆಯುತ್ತದೆ ಅಂತಾ ಹೇಳಿದ್ರು ಹಂಗಾಗಿ ಕೆಲಸ ಇಲ್ಲದಿದ್ದಾಗ ಜಾಬ್ ಕಾರ್ಡ್ ಮಾಡಿಸಿ ತಂದೆ ತಾಯಿಯನ್ನು ಕರೆದುಕೊಂಡು ಉದ್ಯೋಗ ಖಾತ್ರಿ ಕೆಲಸಕ್ಕೆ ಬರುತ್ತೇನೆ ಪ್ರತಿ ದಿನ 316 ರೂ ಹಾಗೆ ಮೂವರಿಗೂ ಸೇರಿ 948 ರೂ ಬರುತ್ತದೆ. ಹಾಗಾಗಿ ಖುಷಿ ಖುಷಿಯಿಂದ ಬಂದು ದುಡಿಯುತ್ತಿದ್ದೇನೆ. ಜೀವನ ನಿರ್ವಹಣೆಗೆ ನರೇಗಾ ಯೋಜನೆ ಬಹಳಷ್ಟು ಅನುಕೂಲವಾಗಿದೆ ಎನ್ನುತ್ತಾರೆ.
ಅಂಗ ವೈಕಲ್ಯವನ್ನು ಮೀರಿ ನಿಂತು ಇತರರೊಂದಿಗೆ ಸರಿ ಸಮಾನವಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾದ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಮುನ್ನುಗ್ಗಬೇಕು ಎಂಬ ಮಾತಿಗೆ ಗಣೇಶ ನಿದರ್ಶನ ಆಗಿದ್ದಾರೆ. ಬದುಕನ್ನು ಸವಾಲಾಗಿ ತೆಗೆದುಕೊಳ್ಳುವ ಬದಲಾಗಿ ಬದುಕಿಗೇ ಸವಾಲು ಒಡ್ಡುವ ರೀತಿಯಲ್ಲಿದೆ ಇವರ ಮನೋಭಾವ. ಇವರ ಕಾಯಕ ಸ್ಪೂರ್ತಿ ಮತ್ತು ಸ್ವಾಭಿಮಾನದ ಮಾರ್ಗ ಇಂತಹ ಅನೇಕರಿಗೆ ಚೈತನ್ಯ ನೀಡುವಂತಿದೆ.ದುಡಿಯುವ ಶಕ್ತಿ ಇದ್ದವರೂ ನೆಪ ಹೇಳಿಕೊಂಡು ಮೈ ಬಗ್ಗಿಸಿ ದುಡಿಯಲಾರದೆ ಸೋಮಾರಿಗಳಾಗಿ ಕಾಲ ಕಳೆಯುವ ಮಂದಿಯ ನಡುವೆ ಗಣೇಶ ಭರವಸೆಯ ತಾರೆಯಂತೆ ಕಾಣುತ್ತಾರೆ. ಈತನ ಬದುಕು ಉತ್ತಮವಾಗಿ ರೂಪುಗೊಳ್ಳಲಿ ಎಂದು ಹಾರೈಸುತ್ತೇನೆ. ನರೇಗಾ ಯೋಜನೆಯ ಅನುಕೂಲ ವನ್ನು ಇನ್ನಷ್ಟು ಮಂದಿ ಪಡೆದುಕೊಳ್ಳಲಿ ಎಂದು ಮನವಿ ಮಾಡುತ್ತೇನೆ.
– ರವಿ ಎ.ಎನ್. ಕಾರ್ಯ ನಿರ್ವಾಹಕ ಅಧಿಕಾರಿಗಳು ರೋಣ

