ಶಿರಹಟ್ಟಿ: ಭ್ರಷ್ಟ ಬಿಜೆಪಿ ಸರ್ಕಾರ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಣ, ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವಿಕೆ ಸೇರಿದಂತೆ ಹಲವಾರು ಯೋಜನೆಗಳನ್ನು ಜನರಿಗೆ ನೀಡುವದಾಗಿ ಹೇಳಿ ಜನರಿಗೆ ಅನ್ಯಾಯ ಮಾಡಿದ್ದು, ಜನತೆಗೆ ಮೋಸ ಮಾಡಿದ್ದು ಬಿಜೆಪಿಗೆ ಈ ಬಾರಿ ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗಿದ್ದು, ನಾನು ಬಿಜೆಪಿ ಮತ್ತು ಆರ್‍ಎಸ್‍ಎಸ್ ಸಿದ್ದಾಂತಗಳನ್ನು ವಿರೋಧಿಸುತ್ತೇನೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಅವರು ಗುರುವಾರ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಗುರುವಾರ ನರೇಗಲ್‍ದಲ್ಲಿ ಜರುಗಿದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ನಾನು ಹೇಳಿದ ಹೇಳಿಕೆಯನ್ನು ತಿರುಚಿ ಅಪಪ್ರಚಾರ ಮಾಡಲಾಗಿದ್ದು, ಇದು ಪಕ್ಕಾ ಬಿಜೆಪಿ ಪಕ್ಷದ ಕುತಂತ್ರವಾಗಿದೆ. ನಮ್ಮ ಕಾಂಗ್ರೆಸ್ ಸರ್ಕಾರವು ಬಿಜೆಪಿ ಮತ್ತು ಆರ್‍ಎಸ್‍ಎಸ್ ಸಿದ್ದಾಂತಗಳನ್ನು ವಿರೋಧಿಸಿದ್ದು, ವೈಯಕ್ತಿಕವಾಗಿ ಯಾರ ಮನಸ್ಸನ್ನು ನೋಯಿಸುವ ಪ್ರಯತ್ನವನ್ನು ನಾನು ಮಾಡಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಸಾಧ್ಯವಿಲ್ಲ, ಆಕಸ್ಮಾತ ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದಿಸುತ್ತೇನೆ. ಬಿಜೆಪಿ ಕೆಲವು ಶಕ್ತಿಗಳು ಕಾಂಗ್ರೆಸ್‍ನ ಮತ್ತು ನನ್ನ ಹೇಳಿಕೆಗಳನ್ನು ತಿರುಚಿ ಬರೆಯುವ ಕೆಲಸ ಮಾಡುತ್ತಿದ್ದು, ಜನರಿಗೆ ಸುಳ್ಳು, ವಂಚನೆ ಮತ್ತು ಮೋಸದಿಂದ ಆಡಳಿತ ನಡೆಸಿ ಆಡಳಿತದ ವ್ಯವಸ್ಥೆಯನ್ನು ಬುಡಮೇಲು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರ ಅತ್ಯಂತ ಪವಿತ್ರವಾಗಿದ್ದು, ಈ ಪವಿತ್ರ ಕ್ಷೇತ್ರದಲ್ಲಿ ನಾನು ಭರವಸೆ ನೀಡುತ್ತಿದ್ದೇನೆ. ಕಾಂಗ್ರೆಸ್ ಪಕ್ಷ ಕೊಟ್ಟ ಪ್ರಣಾಳಿಕೆಯಂತೆ ಪಕ್ಷ ಅಧಿಕಾರಕ್ಕೆ ಬಂದ ಮೊದಲ ಅಧಿವೇಶನದಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಸೂಚನೆ ನೀಡಿದ್ದೇನೆ. ಇದರಲ್ಲಿ ಯಾವ ಸಂಶಯವು ಬೇಡ ಎಂದು ಹೇಳಿದರು.
ಶಿರಹಟ್ಟಿ ಮೀಸಲು ವಿಧಾನಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುಜಾತಾ ದೊಡ್ಡಮನಿ ಮಾತನಾಡಿ, ನಾನು ನಿಮ್ಮೆಲ್ಲರ ಮನೆಯ ಮಗಳಾಗಿದ್ದು, ನಾನು ಹೊರಗಿನ ಅಭ್ಯರ್ಥಿ ಅಲ್ಲ. ಲಕ್ಷ್ಮೇಶ್ವರದಲ್ಲಿ ಜನಿಸಿ ಶಿರಹಟ್ಟಿ ಪಟ್ಟಣದಲ್ಲಿ ವಿಧ್ಯಾಭ್ಯಾಸ ಮಾಡಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆಯಾಗಿ ಕೆಲಸ ಮಾಡಿದ್ದೇನೆ. ವಿರೋಧ ಪಕ್ಷದವರು ಸುಮ್ಮನೆ ನನ್ನ ಮೇಲೆ ಗೂಬೆ ಕೂಡಿಸುತ್ತಿದ್ದಾರೆ. ಸಮಾನತೆ ಅಂಗವಾಗಿ ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಆಧ್ಯತೆ ನೀಡುವ ಉದ್ದೇಶದೊಂದಿಗೆ ಮಹಿಳೆಯರಿಗೆ ಅವಕಾಶ ನೀಡಿದ್ದು, ನನಗೆ ಮತ ನೀಡಿ ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.
ಪ್ರತಿ ಗ್ರಾಮಗಳಲ್ಲಿ ಮಹಿಳೆಯರಾದಿಯಾಗಿ ಎಲ್ಲರು ನನಗೆ ಅದ್ದೂರಿಯಾಗಿ ಮತ್ತು ಅಭೂತಪೂರ್ವ ಬೆಂಬಲ ನೀಡುತ್ತಿದ್ದು, ಕಾಂಗ್ರೆಸ್ ಪಕ್ಷ ಈ ಬಾರಿ ಅಧಿಕಾರಕ್ಕೆ ಬರುವದು ನಿಶ್ಚಿತ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅದಕ್ಕೆ ಸಾಕ್ಷಿ ಇಲ್ಲಿ ಸೇರಿರುವ ಅಪಾರ ಜನಸಂಖ್ಯೆ. ವಿರೋಧಿಗಳ ಮಾತಿಗೆ ಕಿವಿಗೊಡದೇ ನಿಸ್ವಾರ್ಥ ಸೇವೆ ಸಲ್ಲಿಸುವ ಮತ್ತು ರಾಷ್ಟ್ರಹಿತ ಬಯಸುವ ಕಾಂಗ್ರೆಸ್‍ಗೆ ಮತ ನೀಡಿ ನನಗೆ ಆಶೀರ್ವದಿಸಬೇಕೆಂದು ಜನರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಡಾ.ಎಚ್.ಕೆ ಪಾಟೀಲ, ವಾಸಣ್ಣ ಕುರಡಗಿ, ಐ.ಜಿ ಸನದಿ, ಜಿ.ಎಸ್ ಗಡ್ಡದೇವರಮಠ, ವೈ.ಎನ್ ಗೌಡರ, ಶಿವಕುಮಾರಗೌಡ ಪಾಟೀಲ, ಎಚ್.ಡಿ ಮಾಗಡಿ, ಶಿವನಗೌಡ ಪಾಟೀಲ, ಜಯಕ್ಕ ಕಳ್ಳಿ, ದೇವಪ್ಪ ಲಮಾಣಿ, ರಾಮಣ್ಣ ಲಮಾಣಿ, ಎಸ್. ಪಿ ಬಳಿಗಾರ, ವಾಸಣ್ಣ ಕುರಡಗಿ, ಫಕೀರೇಶ ಮ್ಯಾಟಣ್ಣವರ, ಮುತ್ತುರಾಜ ಭಾವಿಮನಿ ಅಪಾರ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.