ಚುನಾವಣೆಗೆ ಜಿಲ್ಲಾಡಳಿತ ಸಿದ್ಧತೆ 20,445 ಯುವ ಮತದಾರರು ಸೇರ್ಪಡೆ: ಡಿಸಿ ವೈಶಾಲಿ.ಎಂ.ಎಲ್

ಸಮಗ್ರ ಪ್ರಭ ಸುದ್ದಿ
4 Min Read

 

ಕರ್ನಾಟಕ ವಿಧಾನಸಭಾ ಚುನಾವಣೆ : ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಜಿಲ್ಲೆಯಲ್ಲಿ ಈ ಬಾರಿ 20445 ಯುವ ಮತದಾರರು ಪಟ್ಟಿಗೆ ಸೇರ್ಪಡೆ

ಗದಗ : ಜಿಲ್ಲೆಯಲ್ಲಿ ಪ್ರಸ್ತುತ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಒಟ್ಟಾರೆ 867955 ಮತದಾರರಿದ್ದು ಆ ಪೈಕಿ 434997 ಪುರುಷ ಮತದಾರರು , 432897 ಮಹಿಳಾ ಮತದಾರರು ಹಾಗೂ 61 ಇತರೆ ಮತದಾರರಿದ್ದು ಶಾಂತಿಯುತ ಹಾಗೂ ಸುವ್ಯವಸ್ಥಿತ ಮತದಾನಕ್ಕಾಗಿ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರದಂದು ವಿಧಾನಸಭಾ ಚುನಾವಣೆ ಸಿದ್ಧತೆಗಳ ಕುರಿತು ಏರ್ಪಡಿಸಲಾದ ಪತ್ರಿಕಾಗೋಷ್ಟಿ ಯನ್ನುದ್ದೇಶಿಸಿ ಅವರು ಮಾತನಾಡಿದರು. ಎಪ್ರಿಲ್ 10 ರವರೆಗೆ ಜಿಲ್ಲೆಯಾದ್ಯಂತ 20445 ಯುವ ಮತದಾರರ ಹೆಸರು ಸೇರ್ಪಡೆಗೊಳಿಸಲಾಗಿದೆ. ನಾಮಪತ್ರಗಳನ್ನು ಸಲ್ಲಿಸುವ ಕೊನೆಯ ದಿನಾಂಕದ ಪೂರ್ವದ 10 ದಿನಗಳ ಹಿಂದೆ ಸ್ವೀಕೃತವಾದ ಎಲ್ಲಾ ಸೇರ್ಪಡೆ ಅರ್ಜಿಗಳನ್ನು ವಿಲೇಗೊಳಿಸಲಾಗಿದ್ದು , ಅದರಂತೆ ಅಂತಿಮ ಮತದಾರ ಪಟ್ಟಿಗಳ ಪ್ರಕಟಣೆಯ ನಂತರ 16472 ಮತದಾರರ ಹೆಸರು ಸೇರ್ಪಡೆಗೊಂಡಿರುತ್ತದೆ ಹಾಗೂ 1015 ಮತದಾರರ ಹೆಸರುಗಳನ್ನು ಮತದಾರ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದರು.

 

ನಾಮಪತ್ರಗಳನ್ನು ಹಿಂಪಡೆಯಲು ಎಪ್ರಿಲ್ 24 ರಂದು ಮ. 3 ಗಂಟೆಯವರೆಗೆ ಅವಧಿ ನಿಗದಿಪಡಿಸಲಾಗಿತ್ತು. ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟಾರೆ 16 ಜನ ಅಭ್ಯರ್ಥಿಗಳಿಂದ ನಾಮಪತ್ರಗಳ ಉಮೇದುವಾರಿಕೆಯನ್ನು ಹಿಂಪಡೆದಿರುತ್ತಾರೆ. ಅಂತಿಮವಾಗಿ ಜಿಲ್ಲೆಯಲ್ಲಿ 51 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆ ಪೈಕಿ ವಿಧಾನಸಭಾ ಕ್ಷೇತ್ರವಾರು ವಿವರ ಇಂತಿದೆ. ಶಿರಹಟ್ಟಿ -14, ಗದಗ-14, ರೋಣ -9 ಹಾಗೂ ನರಗುಂದ -14 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿರುತ್ತಾರೆ. ಜಿಲ್ಲೆಯಲ್ಲಿ 956 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಸದರಿ ಮತಗಟ್ಟೆಗಳ ಪೈಕಿ 198 ಕ್ರಿಟಿಕಲ್ ಮತಗಟ್ಟೆಗಳು ಹಾಗೂ 758 ಮತಗಟ್ಟೆಗಳನ್ನು ನಾನ್ ಕ್ರಿಟಿಕಲ್ ಮತಗಟ್ಟೆಗಳೆಂದು ಗುರುತಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯ 956 ಮತಗಟ್ಟೆಗಳ ಪೈಕಿ 602 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಕಾರ್ಯಗಳನ್ನು ಜರುಗಿಸಲಾಗುವುದು. ಉಳಿದಂತೆ ಆಯೋಗದ ಮಾರ್ಗಸೂಚಿ ಯನ್ವಯ ಮೈಕ್ರೋ ಆಬ್ಸರ್ವರ್ ಹಾಗೂ ವಿಡಿಯೋ ಗ್ರಾಫರ್ ಗಳನ್ನು ನಿಯೋಜಿಸಲಾಗುವುದು.

ಜಿಲ್ಲೆಯ 956 ಮತಗಟ್ಟೆಗಳಿಗೆ 20% ಕಾಯ್ದಿರಿಸಿದ ಸಿಬ್ಬಂದಿಗಳನ್ನು ಒಳಗೊಂಡಂತೆ , 1147 ಮತಗಟ್ಟೆ ಅಧ್ಯಕ್ಷಾಧಿಕಾರಿಗಳನ್ನು, 1147 ಮೊದಲನೇ ಮತಗಟ್ಟೆ ಅಧಿಕಾರಿಗಳನ್ನು ಹಾಗೂ 2294 ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಒಟ್ಟಾರೆ 4589 ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಮತಗಟ್ಟೆ ಅಧಿಕಾರಿಗಳಿಗೆ ಮೇ 3 ರಂದು ಎರಡನೇ ಹಂತದ ತರಬೆತಿಯನ್ನು ಏರ್ಪಡಿಸಲಾಗಿದೆ. ಸದರಿ ತರಬೇತಿ ಕೇಂದ್ರದಲ್ಲಿ ಅಂಚೆ ಮತ ಪತ್ರ ಸೌಲಭ್ಯ ಕೇಂದ್ರವನ್ನು ತೆರೆಯಲಾಗುವುದು ಹಾಗೂ ಸದರಿ ಸೌಲಭ್ಯ ಕೇಂದ್ರದಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಮತಗಟ್ಟೆಯ ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೆ ತಮ್ಮ ಸ್ವಂತ ಸ್ಥಳದಿಂದ ನಿಯೋಜಿತ ವಿಧಾನಸಭಾ ಕ್ಷೇತ್ರಗಳ ತರಬೇತಿ ಕೇಂದ್ರಗಳಿಗೆ ಹಾಜರಾಗಲು ಬಸ್ ಸೌಕರ್ಯವನ್ನು ಕಲ್ಪಿಸಲಾಗಿದೆ. ಮತಗಟ್ಟೆ ಅಧಿಕಾರಿಗಳು ಸದರಿ ಸೌಲಭ್ಯವನ್ನು ಉಪಯೋಗಿಸ ಬಹುದಾಗಿದೆ ಎಂದರು.

ಜಿಲ್ಲೆಯ ಒಟ್ಟು 867955 ಎಲ್ಲಾ ಮತದಾರರಿಗೆ ಇಂದಿನಿಂದ ಮತಗಟ್ಟೆ ಮಟ್ಟದ ಅಧಿಕಾರಿಗಳಿಂದ ( ಬಿ.ಎಲ್.ಓ ) ವೋಟರ್ ಸ್ಲಿಪ್ ಹಾಗೂ ವೋಟರ್ ಗೈಡ್‍ಗಳನ್ನು ಹಂಚಲಾಗುವುದು.

ಕಾರ್ಯಾಲಯಕ್ಕೆ ಒಟ್ಟು 60 ದೂರುಗಳು ಸ್ವೀಕೃತವಾಗಿದ್ದು , ಈ ಪೈಕಿ ಸರಕಾರಿ ಅಧಿಕಾರಿ/ ನೌಕರರಿಗೆ ಸಂಬಂಧಿಸಿದಂತೆ 22, ಸಾಮಾಜಿಕ ಮಾಧ್ಯಮ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ 28 ಹಾಗೂ ಇತರೆ ದೂರುಗಳಿಗೆ ಸಂಬಂಧಿಸಿದಂತೆ 10 ದೂರುಗಳು ಸ್ವೀಕೃತವಾಗಿರುತ್ತವೆ. ಈ ಪೈಕಿ 54 ದೂರುಗಳನ್ನು ಇತ್ಯರ್ಥಪಡಿಸಲಾಗಿದ್ದು 6 ಇತ್ತೀಚಿನ ದೂರುಗಳು ಇತ್ಯರ್ಥ ಪಡಿಸಲಾಗಿರುತ್ತದೆ ಎಂದರು.

ಜಿಲ್ಲೆಯಲ್ಲಿ 80 ವರ್ಷ ಮೀರಿದ ಒಟ್ಟು 14896 ಮತದಾರರು ಹಾಗೂ ಅಂಗವಿಕಲ ಮತದಾರರು ಒಟ್ಟು 11254 ಇರುತ್ತಾರೆ. ಈ ಪೈಕಿ 80 ವರ್ಷ ಮೀರಿದ 872 ಮತದಾರರು ಹಾಗೂ ಅಂಗವಿಕಲರ ಪೈಕಿ 183 ಮತದಾರರು ಮನೆಯ ಮುಖಾಂತರ ಮತದಾನ ಮಾಡಲು ಇಚ್ಛಿಸಿರುತ್ತಾರೆ. ಸದರಿಯವರಿಗೆ ಎಪ್ರಿಲ್ 29 ರಿಂದ ಮೇ 1 ರವರೆಗೆ ಮನೆಯ ಮುಖಾಂತರ ಮತದಾನವನ್ನು ಜರುಗಿಸಲಾಗುವುದು. ಭಾರತ ಚುನಾವಣಾ ಆಯೋಗವು ಅಧಿಸೂಚಿಸಿರುವ ಅಗತ್ಯ ಸೇವೆಗಳ 12 ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಮೇ 2 ,3 ಹಾಗೂ 4 ರಂದು ಅಂಚೆ ಸೌಲಭ್ಯ ಕೇಂದ್ರದಲ್ಲಿ ಮತದಾನವನ್ನು ಜರುಗಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ವೈಶಾಲಿ ಎಂ.ಎಲ್. ಹೇಳಿದರು.

ಜಿಲ್ಲಾ ಪೊಲೀಸ ಅಧೀಕ್ಷಕ ಬಿ.ಎಸ್. ನೇಮಗೌಡ ಅವರು ಮಾತನಾಡಿ ಜಿಲ್ಲೆಯಲ್ಲಿ 2,37,72,230 ನಗದನ್ನು ಹಾಗೂ 46,96,602 ರೂ. ಮೌಲ್ಯದ 18,641.045 ಲೀಟರ್ ಮದ್ಯವನ್ನು ವಶಪಡಿಸಿ ಕೊಳ್ಳಲಾಗಿದೆ. 2,050 ರೂ. ಮೌಲ್ಯದ ಡ್ರಗ್ಸ್ ಹಾಗೂ ಇತರೆ ಸಾಮಗ್ರಿ ವಶಪಡಿಸಿಕೊಳ್ಳಲಾಗಿದೆ. ಸದರಿ ಸಾಮಗ್ರಿಗಳ ಮೌಲ್ಯ 1,67,55,148-00 ರೂ. ಆಗಿದೆ. ನಗದು, ಮದ್ಯ, ಸಾಮಗ್ರಿ ಸೇರಿದಂತೆ ಒಟ್ಟಾರೆ 4,52,26,030-20 ರೂ.ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಿಲ್ಲೆಯ ಮತದಾನ ಕಾರ್ಯಕ್ಕಾಗಿ 959 ಸಿವಿಲ್ ಪೊಲೀಸ , 317 ಹೋಮ್ ಗಾರ್ಡ , 4 ಕೆ.ಎಸ್.ಆರ್.ಪಿ. ತುಕಡಿಗಳು , 4 ಸಿ.ಎ.ಆರ್./ಡಿ.ಎ.ಆರ್ ತುಕಡಿಗಳು, 10 ಎಸ್.ಎ.ಪಿ/ ಸಿ.ಎ.ಪಿ ಎಫ್ ಗಳನ್ನು ಭದ್ರತೆಗೆ ಉಪಯೋಗಿಸಲಾಗುತ್ತಿದೆ ಅಲ್ಲದೇ ಎಸ್ ಎಸ್ ಪಿ, ಆರ್.ಪಿ.ಆರ್. ಎರಡು ತುಕಡಿಗಳನ್ನು ಚುನಾವಣಾ ಕಾರ್ಯಕ್ಕೆ ಬಳಸಲಾಗುತ್ತಿದೆ. ಈವರೆಗೆ ಒಟ್ಟು 25 ಜನರನ್ನು ಗಡಿಪಾರು ಮಾಡಲಾಗಿದೆ. 33 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ವಸಂತ ಮಡ್ಲೂರ, ಚುನಾವಣಾ ಶಾಖೆಯ ಶಿರಸ್ತೇದಾರ ವಿನಾಯಕ ಸಾಲಿಮಠ ಇದ್ದರು.

Share this Article