ಗಜೇಂದ್ರಗಡ : ತಾಲೂಕಿನ ಶಾಂತಗೇರಿ ಗ್ರಾ.ಪಂ ನೂತನ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಹಣಮಂತಪ್ಪ ಪಡಿಯಪ್ಪ ಮಾದರ ಅಧ್ಯಕ್ಷರಾಗಿ ಅನಸೂಯಾ ಪರಶುರಾಮ ಶಿಗ್ಲಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಗ್ರಾ.ಪಂ. ಕಚೇರಿಯಲ್ಲಿ ಸೋಮವಾರ ನೂತನ ಅಧ್ಯಕ್ಷರ ಆಯ್ಕೆಗಾಗಿ ಚುನಾವಣೆ ನಿಗಪಡಿಸಲಾಗಿತ್ತು. ಶಾಂತಗೇರಿ ಗ್ರಾಮ ಪಂಚಾಯಿತಿ ಹಿಂದಿನ ಅಧ್ಯಕ್ಷರಾದ ಲಕ್ಷ್ಮಿಭಾಯಿ ಭೀಮಪ್ಪ ಲಮಾಣಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಪರಿಣಾಮ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯನ್ನು ನಿಗಪಡಿಸಲಾಗಿತ್ತು.

ಚುನಾವಣಾಧಿಕಾರಿಯಾಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರ ಅವರು ಚುನಾವಣಾ ಕಾರ್ಯ ನಡೆಸಿಕೊಟ್ಟರು. ಶಾಂತಗೇರಿ ಪಂಚಾಯತಿ ಒಟ್ಟು 20 ಚುನಾಯಿತ ಸದಸ್ಯರನ್ನು ಹೊಂದಿದ್ದು ನೂತನ ಅಧ್ಯಕ್ಷರ ಆಯ್ಕೆಯಲ್ಲಿ ಗ್ರಾ.ಪಂ.ನ ಚುನಾವಣಾ ಸಭೆಯಲ್ಲಿ ಒಟ್ಟು 19 ಮಂದಿ ಸದಸ್ಯರು ಹಾಜರಾಗಿದ್ದರು. ಒಬ್ಬರು ಸದಸ್ಯರು ಗೈರಾಗಿ ಅದರಲ್ಲಿ 12 ಮತಗಳನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿ ಹಣಮಂತಪ್ಪ ಪಡಿಯಪ್ಪ ಮಾದರ್ ಇವರು ಪಡೆದು ನೂತನ ಅಧ್ಯಕ್ಷರಾಗಿ ಹಾಗೂ ಅನಸೂಯಾ ಪರಶುರಾಮ್ ಶಿಗ್ಲಿ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಳಿದ 6 ಮತಗಳನ್ನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪಡೆದುಕೊಂಡಿದ್ದು ಒಂದು ಮತ ಅಸಿಂಧು ಆಗಿದೆ ಎಂದು ಚುನಾವಣಾ ಅಧಿಕಾರಿ ಘೋಷಿಸಿದರು. ನೂತನ ಅಧ್ಯಕ್ಷರು ಆಯ್ಕೆಯಾಗುತ್ತಿದ್ದಂತೆ ಅವರ ಬೆಂಬಲಿಗರು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಜಯಗಳಿಸಿದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹನುಮಂತಪ್ಪ ಪಡಿಯಪ್ಪ ಮಾದರ್ ಅವರನ್ನು ಪಕ್ಷದ ಮುಖಂಡರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ರೋಣ ಮಂಡಲ ಅಧ್ಯಕ್ಷ ಉಮೇಶ ಮಲ್ಲಾಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್ ಕೆ ಚೌಹಾನ್, ಎಸ್ ಟಿ ಮೋರ್ಚಾ ರಾಜ್ಯ ಸಮಿತಿ ಸದಸ್ಯರಾದ ಹನುಮಂತಪ್ಪ ಹಟ್ಟಿ, ರಮೇಶ ವಕ್ಕರ, ಬಾಲಾಜಿರಾವ ಭೋಸಲೆ, ಶ್ರೀಶೈಲ ಕಾಟಿ, ಮುಖಂಡರಾದ ಸಂಗನಗೌಡ ಮಾಲಿಪಾಟೀಲ, ಮುದಿಯಪ್ಪ ಹಳಗೇರಿ, ಶಾಂತಪ್ಪ ಹಟ್ಟಿಮಣಿ, ಉತ್ತಪ್ಪ ಮಾದರ, ಶರಣಪ್ಪ ಮಾವಿನಮರದ, ಎಲ್ಲಪ್ಪ ಮಾದರ ಸೇರಿದಂತೆ ಅನೇಕರು ಇದ್ದರು.

