ಜಿಪಂ ಯೋಜನಾ ನಿರ್ದೇಶಕರಿಂದ ಮನರೇಗಾ ಕಾಮಗಾರಿ ಪರಿವೀಕ್ಷಣೆ

Samagraphrabha
1 Min Read

ಮುಂಡಗೋಡ : ಅರಣ್ಯ ಪ್ರದೇಶದಲ್ಲಿ ಟ್ರೆಂಚ್ ಗಳನ್ನು ನಿರ್ಮಿಸುವುದರಿಂದ ಮಣ್ಣು ಮತ್ತು ನೀರಿನ ಸಂರಕ್ಷಣೆಯಾಗುವುದರಿಂದ ಮನರೇಗಾ ಯೋಜನೆಯಡಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕರು ಹಾಗೂ ಮುಂಡಗೋಡ ತಾಲೂಕು ಪಂಚಾಯತಿಯ ಆಡಳಿತಾಧಿಕಾರಿಗಳಾದ ಕರೀಂ ಅಸದಿ ಅವರು ಹೇಳಿದರು.

ಅವರು ಮಂಗಳವಾರ, ತಾಲೂಕಿನ ಕಾತೂರು ಗ್ರಾಮ‌ ಪಂಚಾಯತಿ ವ್ಯಾಪ್ತಿಯ ಮುಡಸಾಲಿ ಗ್ರಾಮದ ಕಣವಿಕಾತೂರು ಅರಣ್ಯ ಪ್ರದೇಶದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕಾಂಟೂರು ಟ್ರಂಚ್ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿ ಪರಿಶೀಲಿಸಿ, ಮಾತನಾಡಿದರು.

ಗ್ರಾಮೀಣ ಜನತೆಗೆ ಸ್ಥಳೀಯವಾಗಿಯೇ ಉದ್ಯೋಗ ಒದಗಿಸುವ ಮತ್ತು ಸಮಾಜಕ್ಕೆ ಇಂತಹ ಅತ್ಯುತ್ತಮ ಕೊಡುಗೆ ನೀಡುವ ಯೋಜನೆಯಡಿ ಜನರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ನಿಗದಿಪಡಿಸಿದಂತೆ ಕೆಲಸ ಮಾಡದಿದ್ದರೆ ಯೋಜನೆ ಸಫಲವಾಗುದಿಲ್ಲ ಮತ್ತು ಕೆಲಸದ ಪ್ರಮಾಣದಲ್ಲಿ ರಾಜಿಯಾದರೆ ಕೂಲಿ ಹಣವನ್ನು ಅಳತೆಯನುಸಾರ ಕಡಿತ ಮಾಡಿ ನೀಡಬೇಕಾಗುತ್ತದೆ. ಆದ್ದರಿಂದ ಕಾಮಗಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಅವರು ಕೂಲಿಕಾರರಿಗೆ ಸೂಚನೆ ನೀಡಿದರು.

ಬಳಿಕ ಮುಡಸಾಲಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಮನರೇಗಾ ಯೋಜನೆಯಡಿ ನಿರ್ಮಿಸಿರುವ ಶೌಚಾಲಯ ವೀಕ್ಷಿಸಿದರು. ಬಳಿಕ ಅಡುಗೆ ಕೋಣೆ, ಆಹಾರ ದಾಸ್ತಾನು, ಸಿಬ್ಬಂದಿ ಹಾಜರಾತಿ, ವೈದ್ಯಕೀಯ ತಪಾಸಣಾ ವಹಿ ಸೇರಿದಂತೆ ಪ್ರಮುಖ ಕಡತಗಳನ್ನು ಪರಿಶೀಲಿಸಿದರು. ಇದೇ ವೇಳೆ ವಿದ್ಯಾರ್ಥಿಗಳಿಗೆ ಪ್ರಶ್ನೋತ್ತರಗಳನ್ನು ಕೇಳಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

- Advertisement -
Ad image

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಟಿ.ವಾಯ್. ದಾಸನಕೊಪ್ಪ, ಸಹಾಯಕ ನಿರ್ದೇಶಕರಾದ (ಗ್ರಾಉ) ಸೋಮಲಿಂಗಪ್ಪ ಛಬ್ಬಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಸವರಾಜ‌ ಕಡಪಟ್ಟಿ, ಮನರೇಗಾ ತಾಂತ್ರಿಕ ಸಿಬ್ಬಂದಿ, ಕಾಯಕ ಬಂಧು ಹಾಗೂ ಕೂಲಿಕಾರರು ಉಪಸ್ಥಿತರಿದ್ದರು.

Share this Article