ಹಾವೇರಿ : ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಹಲವು ಭಾಗಗಳಲ್ಲಿ ಬೆಳೆ ಹಾನಿಯಾಗಿದ್ದು ಅಂಥ ಜಮೀನುಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರು ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.
ಬ್ಯಾಡಗಿ, ಹಿರೇಕೆರೂರ ಹಾಗೂ ಹಾನಗಲ್ ತಾಲೂಕುಗಳಿಗೆ ಭೇಟಿ ನೀಡಿ ಹಾಳಾದ ಬೆಳೆಗಳನ್ನು ವೀಕ್ಷಿಸಿದರು ಸಂಬಂಧಿಸಿದ ಅಧಿಕಾರಿಗಳು ಹಾಗೂ ರೈತರಿಂದ ಮಾಹಿತಿ ಪಡೆದುಕೊಂಡರು.
ಜಿಲ್ಲಾಧಿಕಾರಿಗಳು ಕೆಳಗೊಂಡ, ತಡಸ, ಮತ್ತೂರು, ಮಡ್ಲೂರು, ಕಚವಿ, ಚಿನ್ನಮುಳಗುಂದ, ಬಾಳೂರು, ಹನುಮನಹಳ್ಳಿ, ಬಾಳಂಬಿಡ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜಮೀನುಗಳಲ್ಲಿ ನಿರಂತರ ಮಳೆಯಿಂದ ಹಾನಿಯಾದ ಬೆಳೆಗಳನ್ನು ಪರಿಶೀಲಿಸಿ ಹನಿಯಾದ ಬೆಳೆಗಳ ಕುರಿತು ಶೀಘ್ರ ವರದಿ ತಯಾರಿಸಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಬಳಿ ಅಳಲು ತೋಡಿಕೊಂಡ ರೈತರು: ಈ ಬಾರಿ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದೆವು ಆದರೆ ಅತಿಯಾದ ಮಳೆಯಿಂದ ಬೆಳೆದ ಬೆಳೆ ಸಂಪೂರ್ಣ ಹಾನಿಯಾಗಿದೆ. ಸಾಲ ಮಾಡಿ ಬಿತ್ತನೆ ಮಾಡಿದ್ದೇವೆ. ಈ ವರ್ಷ ಉತ್ತಮ ಬೆಳೆ ಬಂದರೆ ನಮ್ಮ ಕಷ್ಟವೆಲ್ಲವೂ ತಿರುತ್ತೇ ಅಂದುಕೊಂಡಿದ್ದೆವು, ಆದರೆ ಈಗ ಪರಿಸ್ಥಿತಿನೇ ಬೇರೆಯಾಗಿದೆ ದಯಮಾಡಿ ತಾವುಗಳು ನಮಗೆ ಬೇಗ ಸರ್ಕಾರದಿಂದ ಬೆಳೆ ಹಾನಿ ಪರಿಹಾರ ಕೊಡಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಕೇಳಿಕೊಂಡರು. ಇದಕ್ಕೆ ಪ್ರತಿಕ್ರಿಯಸಿದ ಜಿಲ್ಲಾಧಿಕಾರಿಗಳು ಈಗಾಗಲೇ ಬೆಳೆ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ಪಡೆದುಕೊಳ್ಳುತ್ತೇದ್ದೇವೆ ಅಧಿಕಾರಿಗಳಿಗೂ ಶೀಘ್ರ ಬೆಳೆ ಹಾನಿ ಕುರಿತು ವರದಿ ಸಲ್ಲಿಸುವಂತೆ ತಿಳಿಸಿದ್ದೇನೆ. ಶೀಘ್ರ ಸರ್ಕಾರಕ್ಕೆ ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಆದ ಹಾನಿ ಕುರಿತು ವರದಿ ಸಲ್ಲಿಸಿ ರೈತರಿಗೆ ಶೀಘ್ರ ಪರಿಹಾರ ನೀಡಲು ಪ್ರಯತ್ನಿಸಲಾಗುವುದು, ಜಿಲ್ಲಾಡಳಿತ ಈ ನಿಟ್ಟಿನಲ್ಲಿ ನಿರಂತರ ಕಾರ್ಯ ಚಟುವಟಿಕೆಯಲ್ಲಿದೆ ಎಂದು ರೈತರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಗ್ರಾಮ ಆಡಳಿತ ಅಧಿಕಾರಿಗಳು ಇದ್ದರು.

