ಗಜೇಂದ್ರಗಡ : ಪಟ್ಟಣದ ದುರ್ಗಾದೇವಿ ದೇವಸ್ಥಾನದಿಂದ ಸರ್ಕಾರದ ಒಳ ಮೀಸಲಾತಿ ಆದೇಶದ ವಿರುದ್ಧ ಜೈಕಾರ ಕೂಗುತ್ತ ಬಂಜಾರ, ಕೋರವ, ಬಜೇಂತ್ರಿ, ಭೋವಿ ಸಮಾಜದ ಮುಖಂಡರು ಕಾಲಕಾಲೇಶ್ವರ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಯವರಿಗೆ ಒಳ ಮೀಸಲಾತಿ ಕೈ ಬಿಡುವಂತೆ ಮನವಿ ಸಲ್ಲಿಸಿದರು.
ಮಂಗಳವಾರ ವಿಧಾನಸಭೆಯಲ್ಲಿ ಪರಿಶಿಷ್ಟ ಜಾತಿಗೆ ಒಳ ಮೀಸಲು ವರ್ಗೀಕರಣವನ್ನು ಮಾಡಿದ್ದು ಪರಿಶಿಷ್ಟ ಜಾತಿಗಳನ್ನು ಮೂರು ವರ್ಗಗಳಾಗಿ ಮಾಡಿ ಲಭ್ಯವಿರುವ ಒಟ್ಟು ಶೇ. 17 ಎಸ್ ಸಿ ಮೀಸಲು ಪ್ರಮಾಣವನ್ನು ಬಲಗೈ ಶೇ. 6 (ಛಲವಾದಿ) ಎಡಗೈ ಶೇ. 6 (ಮಾದಿಗ) ಹಾಗೂ ಸ್ಪೃಶ್ಯ ಜಾತಿಗಳಿಗೆ ಶೇ. 5 ಹಂಚಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು. ಇದನ್ನು ವಿರೋಧಿಸಿ ನಮಗೆ ಅನ್ಯಾಯವಾಗಿದೆ ಸ್ಪೃಶ್ಯರು 63 ಜಾತಿಗಳನ್ನು ಹೊಂದಿದ್ದು ನಮಗೆ ಶೇ. 5 ರಷ್ಟು ಮೀಸಲಾತಿಯನ್ನು ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ದಲಿತ ಮುಖಂಡರು ಏಕವಚನದಲ್ಲಿ ದಾಳಿ ಮಾಡಿದರು.
ದಲಿತ ಮುಖಂಡ ರಾಘು ಚವ್ಹಾಣ ಮಾತನಾಡಿ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೆ ತಂದಿದ್ದು ನಮಗೆ ಅನ್ಯವಾಗಿದೆ. ಸ್ಪೃಶ್ಯ ಜಾತಿಗಳೆಂದರೆ ಯಾವುದು ನೀವೇ ಹೇಳಿ ಸಿದ್ದರಾಮಯ್ಯನವರೇ ಗಜೇಂದ್ರಗಡದಲ್ಲಿ ಯಾವುದೇ ಸ್ಪೃಶ್ಯ ಜಾತಿಯನ್ನು ಹೇಳಿ ಒಂದು ಮನೆ ಬಾಡಿಗೆಯನ್ನು ಕೊಡಿಸಿ ಅಂದರೆ ನಾವು ಸ್ಪೃಶ್ಯ ಜಾತಿಯವರು ಎಂದು ಒಪ್ಪಿಕೊಳ್ಳುತ್ತೇವೆ . ನಾವು ಸಂಪೂರ್ಣವಾಗಿ ಅಸ್ಪೃಶ್ಯರು ನಿರಂತರವಾಗಿದ್ದೇವೆ ತುಳಿತಕ್ಕೆ ಒಳಗಾದವರು. ಇಲ್ಲಿಯವರೆಗೆ ನಮಗೆ ಸರಿಯಾದ ಶಿಕ್ಷಣ ದೊರೆತಿಲ್ಲ. ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಿಗೆ ವಲಸೆ ಹೋಗಿ ದುಡಿಯುತ್ತೇವೆ. ನಾಗಮೋಹನ್ ದಾಸರವರು ನಮಗೆ ಮೋಸ ಮಾಡಿದ್ದಾರೆ ಗಣತಿಯನ್ನು ಸರಿಯಾಗಿ ಮಾಡಿಲ್ಲ ಪ್ರತಿ ಮನೆಗೂ ನೀವು ಭೇಟಿ ನೀಡಿಲ್ಲ ಸರ್ಕಾರ ನಮಗೆ ಮೋಸದ ಆಟವನ್ನು ಆಡಿದೆ ಅನ್ಯಾಯ ಮಾಡಿದೆ ನಮ್ಮ ಸಮುದಾಯದ ಜನಸಂಖ್ಯೆಯನ್ನು ಕಡಿಮೆ ಮಾಡಿ ನಾವು ಯಾವುದೇ ಕಾರಣಕ್ಕೂ ಮುಂದೆ ಬರಬಾರದು ಎಂದು ಈ ಮೀಸಲಾತಿಯನ್ನು ಜಾರಿಗೆ ಮಾಡಿದೆ. ಈ ಹಿಂದೆ ಬ್ರಿಟಿಷರು ನಮಗೆ ಕ್ರಿಮಿನಲ್ ಟ್ರೈಬ್ಸ್ ಎಂದು ಕರೆಯುತ್ತಿದ್ದರು, ಕ್ರಿಮಿನಲ್ ಟ್ರೈಬ್ಸ್ ಎಂದರೆ ಕಳ್ಳರು, ಮುಂದೆ ಕಾಂಗ್ರೆಸ್ ಸರ್ಕಾರವು ಕೂಡ ನಮಗೆ ಇದೇ ರೀತಿ ಮಾಡಲು ಹೊರಟಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರವಿಕಾಂತ್ ಅಂಗಡಿ ಮಾತನಾಡಿ ಲಂಬಾಣಿ, ಭೋವಿ, ಭಜಂತ್ರಿ, ಕೋರವ ಸಮುದಾಯವನ್ನು ಹತ್ತಿಕ್ಕಲು ಸರ್ಕಾರ ಮೀಸಲಾತಿಯನ್ನು ಜಾರಿ ಮಾಡಿದ್ದು ನಾವು ಇನ್ನು ಮುಂದೆ ಇವರ ಮಾತನ್ನು ಕೇಳಬಾರದು ಎಲ್ಲರೂ ಸೇರಿ ನಮಗೆ ಅನ್ಯಾಯ ಮಾಡುತ್ತಿದ್ದಾರೆ ಸಿದ್ದರಾಮಯ್ಯ ಸರ್ಕಾರ ನಮ್ಮ ಪರವಾಗಿಲ್ಲಾ, 63 ಜಾತಿಗಳಿಗೆ ಶೇ. 5% ಮೀಸಲಾತಿಯನ್ನು ನೀಡಿರುವದು ಅನ್ಯಾಯ ಈ ಮೀಸಲಾತಿಯನ್ನು ಪರಿಶೀಲಿಸಿ ನಮಗೆ ಶೇ. 6% ಮೀಸಲಾತಿಯನ್ನು ನೀಡಬೇಕು ಇಲ್ಲವಾದರೆ ಮುಂದಿನ ದಿನಮಾನಗಳಲ್ಲಿ ಸರ್ಕಾರಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭೋವಿ ಸಮಾಜದ ಬಸವರಾಜ ಬಂಕದ್, ಪ್ರಶಾಂತ್ ರಾಠೋಡ್, ವೆಂಕಟೇಶ್ ಮುದಗಲ್, ಹುಚ್ಚಪ್ಪ ರಾಠೋಡ್, ನಾಗಪ್ಪ ಬಜೇಂತ್ರಿ, ದಾನಪ್ಪ ರಾಠೋಡ್, ಮುದಿಯಪ್ಪ ಮುಧೋಳ್, ಯಲ್ಲಪ್ಪ ಬಂಕದ್, ಪ್ರಕಾಶ್ ರಾಠೋಡ್, ಉಮೇಶ ರಾಠೋಡ, ರವಿಚಂದ್ರ ನಿಡಗುಂದಿ, ಹುಲಗಪ್ಪ ನಿಡಗುಂದಿ, ಕುಬೇರಪ್ಪ ರಾಠೋಡ, ದುರುಗಪ್ಪ ಮುಧೋಳ, ಅರ್ಜುನ ರಾಠೋಡ್, ಹಣಮಂತಪ್ಪ ಕಲ್ಲವಡ್ಡರ, ವೆಂಕಪ್ಪ ರಾಠೋಡ, ಭೋವಿ, ಲಂಬಾಣಿ, ಕೋರವ, ಬಜೇಂತ್ರಿ ಸಮಾಜದ ಹಿರಿಯರು, ಯುವಕರು, ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

