ನವಲಗುಂದ: ಪ್ರಜಾಪ್ರಭುತ್ವದಲ್ಲಿ ನಾಗರಿಕರಿಗೆ ಅಧಿಕಾರ ನೀಡುವುದು ಮಾಹಿತಿ ಹಕ್ಕು ಕಾಯ್ದೆಯ ಮೂಲ ಉದ್ದೇಶವಾಗಿದ್ದು ಅಂತಹ ಕಾಯ್ದೆಯ ಬಳಕೆದಾರರ ವಿರುದ್ಧ ವಿಧಾನಸಭೆಯ ಅಧಿವೇಶನದಲ್ಲಿ ಕೆಲವು ಶಾಸಕರುಗಳು ಹಗುರವಾಗಿ ಮಾತನಾಡಿದ್ದು ಬೇಸರ ಮೂಡಿಸಿದೆ ಎಂದು ಆರ್.ಟಿ.ಐ ಕಾರ್ಯಕರ್ತ ಮಾಬುಸಾಬ ಯರಗುಪ್ಪಿ ಅಸಮಾಧಾನ ವ್ಯಕ್ತಪಡಿಸಿದರು..
ಈ ಕುರಿತು ಸಾರ್ವಜನಿಕರೊಂದಿಗೆ ತಹಶೀಲ್ದಾರ ಕಚೇರಿಯ ಪ್ರಥಮ ದರ್ಜೆ ಸಹಾಯಕ ಈಶ್ವರ ಭಜಂತ್ರಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ನೀಡಿ ಮಾತನಾಡಿದ ಅವರು ವಿಧಾನಸಭೆಯಲ್ಲಿ ನಡೆಯುತ್ತಿರುವಂತಹ ಅಧಿವೇಶನದಲ್ಲಿ ಆರ್.ಟಿ.ಐ ಕಾರ್ಯಕರ್ತರ ಕುರಿತು ಹಗುರವಾಗಿ ಮಾತನಾಡಿರುವಂತಹ ಕೆಲವು ಶಾಸಕರು ತಮ್ಮ ಸ್ಥಾನದ ಗೌರವ ಘನತೆಯನ್ನು ಮರೆತು ನಡೆದುಕೊಂಡಿದ್ದಾರೆ, ಅಧಿವೇಶನದಲ್ಲಿ ಚರ್ಚೆ ಮಾಡಲಿಕ್ಕೆ ರಾಜ್ಯದಲ್ಲಿ ಸಾವಿರಾರು ಸಮಸ್ಯೆಗಳಿವೆ, ಆದರೆ ಬಿಜಾಪುರದ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ ಅವರು ಆರ್.ಟಿ.ಐ ಬಳಕೆದಾರರು ಅಧಿಕಾರಿಗಳಿಗೆ, ಕಾಂಟ್ರ್ಯಾಕ್ಟರಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಬ್ಲಾಕ ಮೇಲ್ ಮಾಡುತ್ತಿದ್ದು ಇದರಿಂದ ಅಭಿವೃದ್ಧಿ ಕೆಲಸಕ್ಕೆ ತೂಂದರೆಯಾಗುತ್ತಿದ್ದು ಅವರು ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರದ ಪಿತಾಮಹ ಆಗುತ್ತಿದ್ದಾರೆ ಎಂದು ಹೇಳಿರುವಂತಹ ಹೇಳಿಕೆಗೆ ಪಕ್ಷಾತೀತವಾಗಿ ಕೆಲವು ಶಾಸಕರು ಧ್ವನಿಗೂಡಿಸಿದ್ದು ವಿಷಾದನೀಯ, ಪ್ರಜೆಗಳ ಮತಗಳಿಂದ ಆಯ್ಕೆ ಯಾಗಿರುವಂತಹ ಜನಪ್ರತಿನಿಧಿಗಳು ಕೇಂದ್ರ ಸರ್ಕಾರದಿಂದ 2005ರಲ್ಲಿಯೇ ಅನುಮೋದನೆಗೊಂಡ ಮಾಹಿತಿ ಹಕ್ಕು ಕಾಯ್ದೆಯ ಬಳಕೆಯ ಕುರಿತು ಜಾಗೃತಿ ಮಾಡುವುದನ್ನು ಬಿಟ್ಟು ಆ ಕಾಯ್ದೆಯನ್ನೇ ಬಲಿ ಕೊಡಲು ಹೊರಟಿದ್ದು, ಅಂತಹ ಶಾಸಕರುಗಳ ವಿರುದ್ದ ರಾಜ್ಯಪಾಲರು ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹ ಮಾಡಿದರು.
ಈ ಸಂದರ್ಭದಲ್ಲಿ ಬಶೀರಅಹ್ಮದ ಹುನಗುಂದ, ರಿಯಾಜಅಹ್ಮದ ನಾಶಿಪುಡಿ, ಸಿರಾಜುದ್ದೀನ ಧಾರವಾಡ, ಶಿವಾನಂದ ಹೆಬ್ಬಾಳ, ಯಲ್ಲಪ್ಪ ಬೆಳಹಾರ, ರಫಿಕಸಾಬ ಮುಲ್ಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು…
