ಅಕ್ರಮ ಅಕ್ಕಿ, ಗರಸು ದಂಧೆಕೋರರಿಂದ ಸಾಮಾಜಿಕ ಕಾರ್ಯಕರ್ತ- ರೈತ ಸಂಘಟನೆಯ ಜಿಲ್ಲಾಧ್ಯಕ್ಷ ಅನೀಲ ಕರ್ಣೆ ಮೇಲೆ ಮಾರಣಾಂತಿಕ ಹಲ್ಲೆ

Samagraphrabha
2 Min Read

ಗದಗ: ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಆಹಾರ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಕೊಡಲಾಗುವ ಪಡಿತರ ಅಕ್ಕಿಯನ್ನು ಮಾಫಿಯಾವನ್ನಾಗಿಸಿ ಹಲವು ವರ್ಷಗಳಿಂದ ರಾಜಕೀಯ ಕೃಪಾಕಟಾಕ್ಷದಿಂದ ಅಕ್ರಮ ಅಕ್ಕಿ ದಂಧೆ ಮಾಡುತ್ತಿರುವ ಕಾಂಗ್ರೆಸ್ ಮುಖಂಡ ಅರ್ಜುನ ರಾಠೋಡ ಮತ್ತವನ ಸಹೋದರ ಲಕ್ಷ್ಮಣ ರಾಠೋಡ ಮತ್ತವರ ಗುಂಪು ಗಜೇಂದ್ರಗಡದ ಸಾಮಾಜಿಕ ಕಾರ್ಯಕರ್ತ ಹಾಗೂ ರೈತ ಸಂಘಟನೆಯ ಜಿಲ್ಲಾಧ್ಯಕ್ಷ ಅನಿಲ ಕರ್ಣೇ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ‌.

ಈ ಕುರಿತು ಸೋಮವಾರ ಗದಗ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ರೋಹನ ಜಗದೀಶ ಹಾಗೂ ಗದಗ ಜಿಲ್ಲಾಧಿಕಾರಿ ಸಿ.ಎನ್.ಜಗದೀಶ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷರು ಟಿ.ಡಿ. ಬಸವರಾಜು, ಜಿಲ್ಲಾಧ್ಯಕ್ಷರು ಶಂಕರಗೌಡ ಜಯನಗೌಡ್ರು ಹಾಗೂ ಮಹಿಳಾ ಜಿಲ್ಲಾಧ್ಯಕ್ಷೆ ಲಕ್ಷ್ಮವ್ವ ಮೆಳ್ಳಗಟ್ಟಿ ನೇತೃತ್ವದಲ್ಲಿ ಮನವಿ ಸಲ್ಲಿಸಿ, ಹಲ್ಲೆ ಮಾಡಿದ ದಂಧೆಕೋರರ ಮಟ್ಟ ಹಾಕುವಂತೆ ಒತ್ತಾಯಿಸಿದ್ದಾರೆ.

ಸಾಮಾಜಿಕ ಹೋರಾಟದ ಮೂಲಕ ಹೆಸರುವಾಸಿಯಾದ ನಮ್ಮ ರೈತ ಸಂಘದ ಅನಿಲ ಕರ್ಣೆ ಮೇಲೆ ಹತ್ತಾರು ಜನ ಸೇರಿಕೊಂಡು ಮಾರಣಾಂತಿಕ ಹಲ್ಲೆ ನಡೆಸುತ್ತಿರುವುದು ನೋಡಿದರೆ ಗಜೇಂದ್ರಗಡ ಬಿಹಾರ ರಾಜ್ಯ ವಾಗಿ ಕಾನೂನು ಸತ್ತಿದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಸ್ಥಳೀಯ ಪಿಎಸ್ಐ ಇವರ ಅಕ್ರಮಕ್ಕೆ ಸಾಥ ಕೊಡುತ್ತಿದ್ದಾನೆ. ಅವರು ಜಾತಿಂದನೆ ಕೇಸ್ ದಾಖಲಿಸುತ್ತಾರೆ ರಾಜಿ ಆಗು ಎಂದು ಹಲವು ಬಾರಿ ಕರೆ ಮಾಡಿ ರಾಜಿ ಸಂಧಾನಕ್ಕೆ ಕರೆಯುತ್ತಿದ್ದಾನೆ ಎಂದು ಸಂಘಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -
Ad image

ಅನಿಲ ಕರ್ಣೆ ಪತ್ರಿಕೆಗೆ ಪ್ರತಿಕ್ರಿಯಿಸಿ, ನಾನು ಹಲವು ದಶಕಗಳಿಂದ ರೈತಪರ ಚಿಂತನೆ ಹಾಗೂ ಹೋರಾಟ ನಡೆಸುತ್ತಾ ಬಂದಿದ್ದೇನೆ. ಅಕ್ರಮ ದಂಧೆ ನಡೆಸುತ್ತಿರುವ ಲಕ್ಷ್ಮಣ ರಾಠೋಡ ಮತ್ತವರ ಗುಂಡಾ ಗ್ಯಾಂಗ್ ರೋಣ ರಸ್ತೆಯ ಪುಷ್ಪಾ ಹೋಟೆಲ್ ಎದುರುಗಡೆಯ ಬಸವರಾಜ ಕೋಟಿ ಅವರ ಅಕ್ಕಡಿಕಾಲು ಅಂಗಡಿಯಲ್ಲಿ ನನಗೆ ಹಿಗ್ಗಾಮುಗ್ಗಾ ದೈಹಿಕವಾಗಿ ಹಲ್ಲೆ ನಡೆಸಿ, ನಿಮ್ಮ ರೈತ ಸಂಘ ಏನೂ ಕಿತ್ತುಕೊಳ್ಳೊಕೆ ಆಗೋದಿಲ್ಲ. ಡಿಸಿನೂ ಕೂಡ ಎಂದು ಬಡಿದು ಹೋಗಿದ್ದಾರೆ. ಅಕ್ರಮ ದಂಧೆ ನಡೆಸುತ್ತಿರುವವರ ಉಪಟಳ ಹೆಚ್ಚಾಗಿದೆ. ಇದನ್ನು ನಿಯಂತ್ರಿಸಬೇಕು. ಸಧ್ಯಕ್ಕೆ ಗದಗ ಜಿಲ್ಲಾ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ರಾಜ್ಯ ರೈತ ಸಂಘದ ನಿರ್ದೇಶನದಂತೆ ಮುಂದಿನ ಹೆಜ್ಜೆ ಇಡಲಾಗುತ್ತದೆ ಎಂದು ಹೇಳಿದ್ದಾರೆ.

ಒಟ್ಟಾರೆ, ಈ ಘಟನೆ ಗಜೇಂದ್ರಗಡದ ಅಕ್ರಮ ದಂಗೆಕೋರರ ಕರಾಳ ಚಟುವಟಿಕೆಗೆ ಹಿಡಿದ ಕೈಗನ್ನಡಿಯಾಗಿದೆ. ಛೋಟಾ ಮುಂಬೈ ಎಂಬ ಅಪಖ್ಯಾತಿ ಪಡೆದ ಗಜೇಂದ್ರಗಡ ಇಲ್ಲಿನ ಅಕ್ರಮ ಚಟುವಟಿಕೆಗಳಿಗೆ ದಕ್ಷ ಐಪಿಎಸ್ ಅಧಿಕಾರಿ ರೋಹನ ಜಗದೀಶ ಮಟ್ಟ ಹಾಕ್ತಾರಾ? ಕಾದು ನೋಡಬೇಕಿದೆ.

Share this Article