ಮೈಕ್ರೋ ಪೈನಾನ್ಸ್ ಕಂಪನಿಗಳ ಹಾವಳಿ ನಿಯಂತ್ರಕ್ಕೇ ಮನವಿ
ನವಲಗುಂದ: ಮೈಕ್ರೋ ಪೈನಾನ್ಸ್ ಕಂಪನಿಗಳು, ಇತರೆ ಖಾಸಗಿ ಹಣಕಾಸು ಸಂಸ್ಥೆಗಳು ಸಾಲ ವಸೂಲಿಯ ನೆಪದಲ್ಲಿ ಸಾಲಗಾರರಿಗೆ ಕಿರುಕುಳ ನೀಡಿದರೆ ಅವರ ಮೇಲೆ ಸೂಕ್ತ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಸಾಮಾಜಿಕ ಕಾರ್ಯಕರ್ತ ಮಾಬುಸಾಬ ಯರಗುಪ್ಪಿ ಆಗ್ರಹ ಮಾಡಿದರು.
ಈ ಕುರಿತು ತಹಶೀಲ್ದಾರ ಕಚೇರಿಯ ಶಿರಸ್ತೆದಾರ ಗಣೇಶ ಚಳಕೇರಿ ಅವರ ಮೂಲಕ ಮುಖ್ಯ ಮಂತ್ರಿ, ಗೃಹ ಮಂತ್ರಿ, ಮಾನವ ಹಕ್ಕುಗಳ ಆಯೋಗ ಮತ್ತು ಪೊಲೀಸ ಮಹಾ ನಿರ್ದೇಶಕರಿಗೆ ಮನವಿ ನೀಡಿ ಮಾತನಾಡಿದ ಅವರು ಮೈಕ್ರೋ ಫೈನಾನ್ಸ್ ನವರು ಹಾಗೂ ಖಾಸಗಿ ವ್ಯಕ್ತಿಗಳು ಸಾಲಗಾರರ ಮನೆಯಲ್ಲಿ ರಾತ್ರಿವರೆಗೂ ಕುಳಿತು ಸಾಲ ವಸೂಲಿ ಮಾಡುತ್ತಿರುವಂತಹ ದೃಶ್ಯ ಸಾಮಾನ್ಯವಾಗಿದೆ, ಸಾಲ ವಸೂಲಾತಿಗಾಗಿ ಆರ್.ಬಿ.ಐ ನಿಯಮಗಳನ್ನು ಗಾಳಿಗೆ ತೂರಿ ನಡೆದುಕೂಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿರಾಜುದ್ದಿನ ಧಾರವಾಡ ಮಾತನಾಡಿ ತಾಲೂಕಿನಾದ್ಯಂತ ಅನಧಿಕೃತ ಬಡ್ಡಿ ವ್ಯವಹಾರ ಮಾಡುವವರ ಹಾವಳಿಯು ಹೆಚ್ಚಾಗಿದ್ದು, ಬಡವರು ಕೂಲಿಕಾರ್ಮಿಕರು ಸಾಲ ಮರುಪಾವತಿಗಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ರಾಜ್ಯ ಸರ್ಕಾರ ಇಂತಹ ಸಾಲಗಾರರ ಕಿರುಕುಳ ತಪ್ಪಿಸಲು ಸುಗ್ರಿವಾಜ್ಞೆ ಹೊರಡಿಸಿರುವುದು ಕೇವಲ ಕಾಗದದಲ್ಲಿ ಮಾತ್ರ ಉಳಿದಂತಾಗಿದೆ, ಅನಿಯಂತ್ರಿತ, ನೋಂದಣಿರಹಿತ ಮೈಕ್ರೋ ಫೈನಾನ್ಸ್ ಕಂಪನಿಗಳು, ಲೇವಾದೇವಿದಾರರು, ಸಂಸ್ಥೆಗಳನ್ನು ನಿಯಂತ್ರಿಸುವ ದಿಸೆಯಲ್ಲಿ ಸುಗ್ರಿವಾಜ್ಞೆಯು ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಮಲ್ಲಿಕಾರ್ಜುನ ಸ್ವಾಮಿ ಮಠಪತಿ ಮಾತನಾಡಿ ಮೈಕ್ರೋ ಪೈನಾನ್ಸ್ ಮತ್ತು ಖಾಸಗಿ ಹಣಕಾಸಿನ ಸಂಸ್ಥೆಗಳ ಬಲವಂತದ ಸಾಲ ವಸೂಲಿ ಮತ್ತು ಕಿರುಕುಳ ತಪ್ಪಿಸುವ ಉದ್ದೇಶದಿಂದ ರೂಪಿಸಿದ ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಒತ್ತಡ ತಂತ್ರಗಳ ನಿಷೇಧ) ಸುಗ್ರೀವಾಜ್ಞೆ 2025ನ್ನು ಸಂಪೂರ್ಣ ಜಾರಿಗೆ ಬಂದಾಗ ಮಾತ್ರ ಸಾಲದ ಸುಳಿಯಲ್ಲಿ ಸಿಲುಕಿದವರಿಗೆ ನ್ಯಾಯ ಒದಗಿಸಿದಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮಹಮ್ಮದಲಿ ಮಿರ್ಜಿ, ರಿಯಾಜಅಹ್ಮದ ನಾಶಿಪುಡಿ, ಬಾಬುಶ್ಯಾ ಮಕಾಂದಾರ, ನಿಂಗಪ್ಪ ಕುಂಬಾರ, ಅಕ್ಬರ ಮುಲ್ಲಾ ಉಪಸ್ಥಿತರಿದ್ದರು…

