7 ಗಂಟೆಗಳ ಕಾರ್ಯಾಚರಣೆ ಬಳಿಕ ಚಿರತೆ ಸೆರೆ

Samagraphrabha
2 Min Read

ರಾಣೆಬೆನ್ನೂರ : ಅರಣ್ಯದಂಚಿನ ಗ್ರಾಮಗಳ ಬಳಿ ಕಾಣಿಸಿಕೊಳ್ಳುತ್ತಿದ್ದ ಚಿರತೆಗಳು ಬುಧವಾರ ಬೆಳ್ಳಂಬೆಳಗ್ಗೆ ನಗರದ ನಾಡಗೇರಿ ಓಣಿಯಲ್ಲಿ ಚಿರತೆ ಕಾಣಿಸಿಕೊಂಡು ಆತಂಕ ಮೂಡಿಸಿದ ಘಟನೆ ನಡೆದಿದ್ದು ಸ್ಥಳೀಯರ ಮಾಹಿತಿ ನೀಡಿದ ತಕ್ಷಣ ಅರಣ್ಯಾಧಿಕಾರಿಗಳ ನಿರಂತರ 6 ಗಂಟೆಗಳ ಕಾರ್ಯಾಚರಣೆ ಬಳಿಕ ಚಿರತೆ ಸೆರೆಯಾಗಿ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ನಗರದ ಕುರುಬಗೇರಿಯ ನಾಡಗೇರಿ ಓಣಿಯ ಪಿ.ಟಿ. ಕಾಕಿ ಎಂಬುವರ ಮನೆಯ ಮೆಟ್ಟಿಲುಗಳ ಮೇಲೆ ಚಿರತೆ ಮಲಗಿತ್ತು. ಕುಟುಂಬದವರು ಬೆಳಗ್ಗೆ ಮನೆ ಬಾಗಿಲು ತೆಗೆದಾಗ ಚಿರತೆ ಕಂಡು ಭಯಭೀತರಾಗಿ ಕೂಡಲೇ ಬಾಗಿಲು ಬಂದ್ ಮಾಡಿ ಚಿರತೆ ಮಲಗಿರುವುದನ್ನು ವಿಡಿಯೋ ಹಾಗೂ ಫೋಟೊ ತೆಗೆದು ಅಕ್ಕಪಕ್ಕದವರಿಗೆ ಹಾಕಿದ್ದಾರೆ.

ಸ್ಥಳಿಯರು ಅರಣ್ಯಾಧಿಕಾರಿಗಳಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಅಷ್ಟರಲ್ಲಿ ಚಿರತೆ ಕಾಕಿಯವರ ಮನೆ ಪಕ್ಕದ ಗೋಡೆ ಹಾರಿ ಹಳೇಯ ಮನೆಯೊಂದರಲ್ಲಿ ಸೇರಿಕೊಂಡಿತ್ತು. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು, ಅಗ್ನಿಶಾಮಕ ದಳದ ಸಿಬ್ಬಂದಿ ಚಿರತೆಯಿದ್ದ ಪಾಳು ಮನೆಯನ್ನು ಬಲೆಯಿಂದ ಸಂರ್ಪೂಣ ಸುತ್ತುವರಿಸಿದರು.

ಅಷ್ಟರಲ್ಲಿ ಚಿರತೆ ಭಯಭೀತಿಗೊಂಡು ಬಲೆಯಿಂದ ತಪ್ಪಿಸಿಕೊಂಡು ಮತ್ತೊಂದು ಪಕ್ಕದ ಕಾಂಪೌಂಡ್ ಹಾರಿ ದನದ ಕೊಟ್ಟಿಗೆ ಸೇರಿಕೊಂಡಿತು. ಇದರಿಂದಾಗಿ ಚಿರತೆ ಅಲ್ಲಿಯೆ ಇರಲು ಬಿಟ್ಟ ಅಧಿಕಾರಿಗಳು, ಅರಳವಳಿಕೆ ತಜ್ಞರನ್ನು ಕರೆಯಿಸಿ ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಿ ಯಾವುದೆ ರೀತಿ ಪ್ರಾಣಹಾನಿ, ಗಾಯ ಸಹ ಆಗದಂತೆ ಸೆರೆಹಿಡಿದಪ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.

- Advertisement -
Ad image

ಯಶಸ್ವಿ ಕಾರ್ಯಾಚರಣೆ:

ಕಾಕಿ ಅವರ ಮನೆಯಲ್ಲಿ ಚಿರತೆ ಬೆಳಗ್ಗೆ 5 ಗಂಟೆಗೆ ಕಾಣಿಸಿಕೊಂಡಿತ್ತು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಬೆಳಿಗ್ಗೆ 6 ಗಂಟೆಗೆ ಆಗಮಿಸಿದರೂ ಆದರೆ ಚಿರತೆ ಸೆರೆಹಿಡಿಯಲು ಸತತ 7 ಗಂಟೆಗಳ ಕಾಲ ತೆಗೆದುಕೊಂಡರು. ಸ್ಥಳಿಯವಾಗಿ ಅರಣ್ಯಾಧಿಕಾರಿಗಳ ಬಳಿ ಬಲೆ ಇಲ್ಲದ ಕಾರಣ ಕೊರಚರ ಓಣಿಯಿಂದ ಹಂದಿಗಳನ್ನು ಹಿಡಿಯುವ ಬಲೆ ತಂದು ಕಾರ್ಯಾಚರಣೆ ನಡೆಸಲಾಯಿತು.

ಅಲ್ಲದೆ ಜಿಲ್ಲೆಯ ಅರಣ್ಯ ಇಲಾಖೆಯಲ್ಲಿ ಕಾಡು ಪ್ರಾಣಿಗಳಿಗೆ ಅರವಳಿಕೆ ಚುಚ್ಚುಮದ್ದು ನೀಡುವ ತಜ್ಞರು ಇಲ್ಲದ ಕಾರಣ ಗದಗ ಜಿಲ್ಲೆ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯದಿಂದ ಡಾ. ಪವಿತ್ರಾ ಜೈನ್ ಎಂಬುವರನ್ನು ಕರೆಯಿಸಿಕೊಳ್ಳಲಾಯಿತು. ಅವರು ಬರಲು 3 ಗಂಟೆ ಸಮಯ ತೆಗೆದುಕೊಂಡರು. ಅಷ್ಟರಲ್ಲಿ ಚಿರತೆ ದನದ ಕೊಟ್ಟಿಗೆಯಲ್ಲಿದ್ದ ಕಟ್ಟಿಗೆಗಳ ಮಧ್ಯೆ ಸೇರಿಕೊಂಡು ಕಾಣಸಿಗದಂತಾಯಿತು ಹೀಗಾಗಿ ಚಿರತೆ ಸೆರೆಹಿಡಿಯಲು 7 ಗಂಟೆಗಳ ಕಾರ್ಯಾಚರಣೆ ನಡೆಯಿತು.

ಘಟನಾ ಸ್ಥಳಕ್ಕೆ ಎಸ್ಪಿ ಯಶೋದಾ ವಂಟಗೋಡಿ, ಡಿವೈಎಸ್ಪಿ ಲೋಕೇಶ ಜೆ., ಸಿಪಿಐ ಸಿದ್ದೇಶ, ಪಿಎಸ್‌ಐ ಗಡ್ಡೆಪ್ಪ ಗುಂಜುಟಗಿ, ಪ್ರವಿಣಕುಮಾರ ವಾಲೀಕಾರ, ನಗರಸಭೆ ಆಯುಕ್ತ ಫಕ್ಕೀರಪ್ಪ ಇಂಗಳಗಿ, ತಹಸೀಲ್ದಾರ್ ಆರ್.ಎಚ್. ಭಾಗವಾನ್, ಅರಣ್ಯ ಇಲಾಖೆಯ ಅಧಿಕಾರಿಗಳಾದ ಅಬ್ದುಲ್ ಅಜೀಜ, ಸತೀಶ ಪೂಜಾರ, ಲಿಂಗಾರೆಡ್ಡಿ ಮಂಕಣಿ, ಸಿಬ್ಬಂದಿಯಾದ ಎಂ. ಪ್ರೇಮಕುಮಾರ, ಲಾಲಪ್ಪ ಲಮಾಣಿ ಹಾಗೂ ಅಗ್ನಿಶಾಮಕದ ದಳದ ಸಿಬ್ಬಂದಿ, ಪೊಲೀಸರು ಪಾಲ್ಗೊಂಡಿದ್ದರು.

Share this Article