ಬಸಮ್ಮ ತಾಯಿಯವರು ಎಲ್ಲರಿಗೂ ಮಾದರಿ

Samagraphrabha
2 Min Read

ನರೇಗಲ್:‌ ಮಹಿಳೆಯರು ಜೀವನದಲ್ಲಿ ಎಂತಹದೇ ಸಮಸ್ಯೆ ಬಂದರು ಭಯಪಡುವುದಿಲ್ಲ ಅವುಗಳನ್ನು ಗಟ್ಟಿಯಾಗಿ ಎದುರಿಸಿ ನಿಲ್ಲುತ್ತಾರೆ. ಯಾಕೆಂದರೆ ಅವರಲ್ಲಿ ಆತ್ಮಬಲ ಹೆಚ್ಚಿರುತ್ತದೆ ಎಂದು ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಹೇಳಿದರು.
ಪಟ್ಟಣದ ಹಿರೇಮಠದ ಸಭಾಭವನದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ರೋಣದ ಬಸಮ್ಮನವರು ಪಾಟೀಲರ 21ನೇ ಪುಣ್ಯಸ್ಮರಣೋತ್ಸವದ ಮಹಿಳಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮನೆಯನ್ನು ನಡೆಸುವ ಗುರುತರ ಜವಾಬ್ದಾರಿ ಮಹಿಳೆಯ ಮೇಲಿದೆ. ಈ ಜವಾಬ್ದಾರಿಯನ್ನು ಸಮರ್ಥವಾಗಿ ನೆರವೇರಿಸಿ ಯಶಸ್ವಿಯಾದವರು ಬಸಮ್ಮ ತಾಯಿಯವರು. ಅವರು ತಮ್ಮ ಮಕ್ಕಳಿಗೆಲ್ಲರಿಗೂ ಉತ್ತಮ ಸಂಸ್ಕಾರ ಮತ್ತು ಶಿಕ್ಷಣ ನೀಡಿದ್ದರಿಂದ ಅವರು ಈ ಸಮಾಜದಲ್ಲಿನ ಗಣ್ಯ ವ್ಯಕ್ತಿಗಳಾಗಿದ್ದಾರೆ. ಇದು ನಮ್ಮೆಲ್ಲ ತಾಯಂದಿರಿಗೆ ಮಾದರಿಯಾಗಬೇಕು. ನೀವುಗಳೆಂದಿಗೂ ಕಷ್ಟಕ್ಕೆ ಹೆದರಬಾರದು ಎಂದರು. ನಂತರ ಅವರು ಹಾಡಿದ ಹಾಡುಗಳು, ಹೇಳಿದ ನಗೆ ಪ್ರಸಂಗಗಳು ಜನಮನ ಸೂರೆಗೊಂಡವು.
ಉಪನ್ಯಾಸಕಿ ಸುಧಾ ಹುಚ್ಚಣ್ಣವರ ಉಪನ್ಯಾಸ ನೀಡಿ, ಬಸಮ್ಮ ತಾಯಿಯವರು ಎಲ್ಲರ ಹೃದಯದಲ್ಲಿದ್ದಾರೆ. ತಮ್ಮ ಮಕ್ಕಳನ್ನು ಈ ನಾಡಿನ ಆಸ್ತಿಯನ್ನಾಗಿಸಿದ ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಅಂದಿನ ಕಾಲದಲ್ಲಿಯೆ ರೋಣದಲ್ಲಿ ಅಕ್ಕ ಮಹಾದೇವಿ ಮಂಡಳವನ್ನು ಹುಟ್ಟು ಹಾಕಿ ಆ ಮೂಲಕ ಮಹಿಳೆಯರ ಶಿಕ್ಷಣ ಮತ್ತು ಸ್ವಾವಲಂಬಿ ಬದುಕಿಗೆ ದಾರಿ ಮಾಡಿಕೊಟ್ಟವರು ಮಾತೋಶ್ರೀ ಬಸಮ್ಮನವರು. ಸಾವಿತ್ರಿಬಾಯಿ ಫುಲೆ ಮಾಡಿದ ಕಾರ್ಯವನ್ನು ಗ್ರಾಮೀಣ ಭಾಗದಲ್ಲಿ ಬಸಮ್ಮ ತಾಯಿಯವರು ಮಾಡಿದ್ದಾರೆ ಎಂದರು.
ಆಶೀರ್ವಚನ ನೀಡಿದ ಅಬ್ಬಿಗೇರಿ ಹಿರೇಮಠದ ವೀರಭದ್ರ ಶಿವಾಚಾರ್ಯರು , ಒಬ್ಬ ಸಮರ್ಥ ತಾಯಿ ಹೇಗಿರಬೇಕು ಎಂಬುದಕ್ಕೆ ಬಸಮ್ಮತಾಯಿಯವರು ಉದಾಹರಣೆಯಾಗಿದ್ದಾರೆ. ಮನೆಗೆ ಬಂದ ಯಾರನ್ನೇ ಆಗಲಿ ಬರಿಗೈಯಲ್ಲಿ, ಬರಿ ಹೊಟ್ಟೆಯಲ್ಲಿ ಕಳಿಸಿದ ಉದಾಹರಣೆಗಳೇ ಇಲ್ಲ. ಒಂದು ಕುಟುಂಬದಲ್ಲಿನ ಸಂಸ್ಕೃತಿ ಹೇಗಿರಬೇಕು ಎಂಬುದನ್ನು ಪಾಟೀಲರ ಮನೆತನ ನೋಡಿಯೇ ಕಲಿಯಬೇಕು. ಕೇವಲ ರೋಣಕ್ಕಷ್ಟೆ ಸೀಮಿತಗೊಳಿಸದೆ ಪರ ಊರಿನಲ್ಲಿಯೂ ಇಂತಹ ಕಾರ್ಯಗಳನ್ನು ಮಾಡುವ ಮೂಲಕ ಪಾಟೀಲರ ಕುಟುಂಬ ಇತರರಿಗೆ ಮಾದರಿಯಾಗಿದೆ ಎಂದರು.
ಅನ್ನಪೂರ್ಣಮ್ಮ ಜಿ. ಪಾಟೀಲ ಮಾತನಾಡಿದರು. ಬಸಮ್ಮ ಲಕ್ಕನಗೌಡ್ರ, ಮಂಜುಳಾ ರೇವಡಿ, ಪಿಎಸ್‌ಐ ಐಶ್ವರ್ಯ ನಾಗರಾಳ, ಬಸಮ್ಮ ಪಾಟೀಲ, ರೇಣುಕಾ ಧರ್ಮಾಯತ, ಬಸಿರಾಬಾನು ನದಾಫ್, ಮಂಜುಳಾ ಹುಲ್ಲಮ್ಮನವರ, ಶಶಿಕಲಾ ಅಂಗಡಿ, ಶಶಿಕಲಾ ಪಾಟೀಲ, ರತ್ನಮ್ಮ ದಢೇಸೂರಮಠ, ಕಸ್ತೂರಿ ಧನ್ನೂರ, ಗೀತಾ ಭೋಪಳಾಪೂರ, ಭಾರತಿ ಶಿರ್ಸಿ, ಮಂಜುಳಾ ಪಾಟೀಲ, ನಿರ್ಮಲಾ ಹಿರೇಮಠ ಇದ್ದರು.

Share this Article