ಲಕ್ಷ್ಮೇಶ್ವರ: ತಾಲೂಕು ಕೇಂದ್ರವಾಗಿ ಗದಗ ಜಿಲ್ಲೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ನೂತನ ತಾಲೂಕು ಕೇಂದ್ರ ಮತ್ತು ವ್ಯಾಪಾರ ವಹಿವಾಟಕ್ಕೆ ಹೆಚ್ಚು ಹೆಸರು ವಾಸಿಯಾಗಿರುವ ಲಕ್ಷ್ಮೇಶ್ವರ ಪಟ್ಟಣದಲ್ಲಿ ಮೂಲಭೂತ ಸೌಕರ್ಯ ಮತ್ತು ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ ಸ್ವತಃ ಶಾಸಕ ಡಾ ಚಂದ್ರು ಲಮಾಣಿ ಅವರು ಪ್ರತಿನಿಧಿಸುವ ತವರು ಕ್ಷೇತ್ರದಲ್ಲಿ ಸ್ವಚ್ಚತೆ ಮೂಲಭೂತ ಸೌಲಭ್ಯಗಳಿಲ್ಲ.
ಇದಕ್ಕೆ ಉದಾಹರಣೆ ಎಂಬಂತೆ ಪಟ್ಟಣದ ಪುರಸಭೆಯಿಂದ ಆಶ್ರಯ ವಸತಿ ಯೋಜನೆ ಅಡಿಯಲ್ಲಿ ನಿವೇಶನ ಪಡೆದು ಅರ್ಹ ಬಡ ಫಲಾನುಭವಿಗಳು ಮನೆ ಕಟ್ಟಿಸಿಕೊಂಡು ವಾಸಿಸುತ್ತಿರುವ ಗಡ್ಡಯ್ಯನಗರ, ರಂಭಾಪುರಿನಗರ, ಕರೆಗೌರಿನಗರ, ರಂಗಾಚಾರಿನಗರ, ಮುಕ್ತಿನಗರ ಬಡಾವಣೆಗಳು ಮತ್ತು ಬಸವೇಶ್ವರ ನಗರ,ಕೌಡೇಶ್ವರ ನಗರ ಸೇರಿದಂತೆ ಹಲವಡೆ ಮೂಲಭೂತ ಸೌಲಭ್ಯಗಳಾದ ರಸ್ತೆ,ಒಳಚರಂಡಿ ಇಲ್ಲದೆ ಇಲ್ಲಿನ ನಿವಾಸಿಗಳು ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದು ಸೊಳ್ಳೆಗಳ ಕಾಟದಿಂದ ಬಾಗಿಲ ಮುಚ್ಚಿಕೊಂಡು ಡೆಂಗ್ಯೂ ಮಲೇರಿಯಾದಂತ ಕಾಯಿಲೆಗೆ ತುತ್ತಾಗುವ ಭಯದಲ್ಲಿ ಇಲ್ಲಿನ ಸಾರ್ವಜನಿಕರು ವಾಸಿಸುತ್ತಿದ್ದಾರೆ.
ಚರಂಡಿ ತುಂಬಾ ಕಸ ಕಡ್ಡಿ:
20 ರಿಂದ 25 ದಿನಕೊಮ್ಮೆ ಕುಡಿಯುವ ನೀರು ಬಿಡುತ್ತಾರೆ ಇಂಥ ಮಳೆಗಾಲದ ಸಮಯದಲ್ಲಿ ನೀರಿನ ಅಭಾವ ಒಂದು ಕಡೆಯಾದರೆ ಚರಂಡಿಗಳು ಸ್ವಚ್ಛತೆ ಕಾಣದೆ ಕಸ ಕಡ್ಡಿ ತುಂಬಿವೆ ಮಳೆ ಬಂದರೆ ಮಳೆ ನೀರು ಹರಿದು ಹೋಗದೆ ಚರಂಡಿ ಬಂದ್ ಆಗಿ ರಸ್ತೆ ಮೇಲೆ ನೀರು ಹರಿಯುತ್ತದೆ, ರಸ್ತೆಯ ಪಕ್ಕದಲ್ಲಿಯೇ ಕಸದ ರಾಶಿಗಳು ದಿನ ಪ್ರತಿ ಕಣ್ಣು ಕುಕ್ಕುತ್ತವೆ.

ಸಾರ್ವಜನಿಕರ ಅಸಹಕಾರ :
ಸಾರ್ವಜನಿಕರು ಸಹ ತಮ್ಮ ಮನೆ, ಹೋಟೆಲ,ವಾಣಿಜ್ಯ ಮಳಿಗೆಗಳ ಮುಂದೆ ಬರುವ ಪುರಸಭೆ ವಾಹನಕ್ಕೆ ಕಸ ಹಾಕದೆ ರಸ್ತೆ ಪಕ್ಕದಲ್ಲಿ ತಮಗೆ ತಿಳಿದ ಹಾಗೆ ಕಸ ಹಾಕಿ ಹೋಗುತ್ತಾರೆ ಇದರಿಂದ ರಸ್ತೆ ಪಕ್ಕದಲ್ಲಿ ಕಸದ ರಾಶಿ ಕಾಣುತ್ತಿದೆ.
ಪುರಸಭೆಯವರು ಪಟ್ಟಣದಲ್ಲಿ ಮೂಲಭೂತ ಸೌಲಭ್ಯ ಸ್ವಚ್ಛತೆ ಕುಡಿಯುವ ನೀರು ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪುರಸಭೆಯ ಅಧ್ಯಕ್ಷರಿಗೆ ಮತ್ತು ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದೇವೆ ಆದರೂ ಸಹ ಪುರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಸಾರ್ವಜನಿಕರ ಸಮಸ್ಯೆಗೆ ಆದ್ಯತೆ ನೀಡುತ್ತಿಲ್ಲ.
* ಮಹೇಶ್ ಕಲಘಟಗಿ,
ಕರವೇ ತಾಲೂಕಾಧ್ಯಕ್ಷರು
ಲಕ್ಷ್ಮೇಶ್ವರ ತಾಲೂಕು ಕೇಂದ್ರವಾಗಿದ್ದರಿಂದ ಬೇರೆ ಬೇರೆ ಊರುಗಳಿಂದ ಜನರು ಬಂದು ವಾಸ ಮಾಡುತ್ತಿದ್ದಾರೆ ಜನಸಂಖ್ಯೆಗೆ ಅನುಗುಣವಾಗಿ ಪುರಸಭೆಯಲ್ಲಿ ಪೌರ ಕಾರ್ಮಿಕರು ಕೊರತೆ ಇದೆ
ಈಗಾಗಲೇ ಹೆಚ್ಚು ಪೌರ ಕಾರ್ಮಿಕರ ನೇಮಕಾತಿ ಮಾಡಿಕೊಳ್ಳಿ ಎಂದು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಅವರು ಹೊಸ ಪೌರ ಕಾರ್ಮಿಕರನ್ನು ನೇಮಕಾತಿ ಮಾಡಿಕೊಂಡರೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ ಹಾಗೂ ಎಲ್ಲ ಸದಸ್ಯರೊಂದಿಗೆ ಚರ್ಚಿಸಿ ಎಲ್ಲ ವಾಡುಗಳಲ್ಲಿ ಚರಂಡಿ ಮತ್ತು ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳುತ್ತೇವೆ.
* ಮಹಾಂತೇಶ್ ಬೀಳಗಿ
ಪುರಸಭೆ ಮುಖ್ಯಾಧಿಕಾರಿ ಲಕ್ಷ್ಮೇಶ್ವರ.

