ನರೇಗಲ್: ಸಮೀಪದ ಅಬ್ಬಿಗೇರಿ ಗ್ರಾಮದ ಬಾಲಕರ ಸರ್ಕಾರಿ ಮಾದರಿ ಕೇಂದ್ರ ಶಾಲೆಯಲ್ಲಿ 18 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿ 1998 ರಲ್ಲಿ ನಿವೃತ್ತಿ ಹೊಂದಿದ್ದ ಶಿಕ್ಷಕ ವಿರೂಪಾಕ್ಷಪ್ಪ ಗು. ಬಳಗೇರಿ ಇವರು ತಮ್ಮ ನಿವೃತ್ತಿ ವೇತನದಲ್ಲಿ ಸಂಗ್ರಹಿಸಿದ ₹1 ಲಕ್ಷ ರೂಪಾಯಿಯನ್ನು ಶಾಲೆಗೆ ದೇಣಿಗೆಯಾಗಿ ನೀಡಿದರು.
ಈ ಶಾಲೆಯಲ್ಲಿ ಕಲಿಯುತ್ತಿರುವ 1 ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯಯವ ಪ್ರತಿಭಾವಂತರಿಗೆ ನೀಡುವಂತೆ ತಿಳಿಸಿದರು. ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕನಲ್ಲಿ ಠೇವಣಿ ಇಟ್ಟು ಅದರ ಬಡ್ಡಿ ಹಣವನ್ನು ಬಹುಮಾನ ರೂಪದಲ್ಲಿ ನೀಡಬೇಕು ಎಂದು ಜುಲೈ 14 ರಂದು ತಾವೇ ಖುದ್ದಾಗಿ ಶಾಲೆಗೆ ಆಗಮಿಸಿ ಹಣವನ್ನು ನೀಡಿ ಶಿಕ್ಷಕರಲ್ಲಿ ವಿನಂತಿಸಿದರು.
ದೇಣಿಗೆ ನೀಡಿದ ನಿವೃತ್ತ ಶಿಕ್ಷಕರನ್ನು ಸೋಮವಾರ ಗ್ರಾಮದ ಹಿರಿಯರು, ಶಿಕ್ಷಣ ಪ್ರೇಮಿಗಳು ಸನ್ಮಾನಿಸಿ ಗೌರವಿಸಿದರು. ಈ ವೇಳೆ ಮಾತನಾಡಿದ ವಿರೂಪಾಕ್ಷಪ್ಪ ಬಳಗೇರಿ ಅವರು, ಶಿಕ್ಷಕನ ಪಾತ್ರ ಕೇವಲ ಪಾಠ ಹೇಳುವುದು ಮಾತ್ರವಲ್ಲ, ಬದಲಾಗಿ ವಿದ್ಯಾರ್ಥಿಗಳ ಬದುಕಿನಲ್ಲಿ ಬೆಳಕಿನ ದಾರಿ ತೋರಿಸುವ ದೀಪವಾಗಿದೆ. ಅವರ ಜೀವನ ಅನಕೂಲವಾಗುವಂತೆ ಹಾಗೂ ಸರ್ಕಾರಿ ಶಾಲೆ ಅಭಿವೃದ್ದಿಗೊಳ್ಳುವಂತೆ ಶಿಕ್ಷಕರು ಜಾಗೃತಿ ವಹಿಸಬೇಕು ಎಂದರು.
ನಿವೃತ್ತ ಬಿಇಓ ಶಂಕರ ಹೂಗಾರ, ಬಸವರಾಜ ವೀರಾಪುರ, ಎಸ್‌ಡಿಎಂಸಿ ಅಧ್ಯಕ್ಷ ಡಿ. ಬಿ. ಬಿಲ್ಲರ, ಉಪಾಧ್ಯಕ್ಷೆ ಬಿ. ಎಸ್. ತೆಗ್ಗಿನಕೇರಿ, ಸದಸ್ಯೆ ಅನ್ನಪೂರ್ಣ ಹಂಚಿನಾಳ, ಕೆಜಿಎಸ್ ಶಾಲೆಯ ಮುಖ್ಯ ಶಿಕ್ಷಕ ಡಿ. ಎಚ್. ಪರಂಗಿ, ಆರ್. ವಿ. ಬೆಲ್ಲದ, ಪ್ರಭಾರೆ ಮುಖ್ಯ ಶಿಕ್ಷಕ ಆರ್. ಡಿ. ರಂಗಣ್ಣವರ ಇದ್ದರು.
ಸರ್ಕಾರಿ ಶಾಲೆಗೆ ₹1ಲಕ್ಷ ದೇಣಿಗೆ ನೀಡಿದ ನಿವೃತ್ತ ಶಿಕ್ಷಕ
