ಗದಗ :ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಗ್ರಾಮದಲ್ಲಿ ಜುಲೈ 1ರಂದು ರಾತ್ರಿ 10:00 ಗಂಟೆಯಿಂದ ಜುಲೈ 2 ರಂದು ಮುಂಜಾನೆ 05:30 ಗಂಟೆಯ ನಡುವೆ ಸೋಗಿಹಾಳ ರಸ್ತೆಗೆ ಇರುವ ಮನೆಯೊಂದರ ಕೀಲಿ ಮುರಿದು 5 ಗ್ರಾಂ ತೂಕದ ಒಂದು ಬಂಗಾರದ ಬೋರಮಳ ಸರ, 2.5 ಗ್ರಾಂ ತೂಕದ ಬಂಗಾರದ ಬೆಂಡವಾಲಿ, 5 ಗ್ರಾಂ ತೂಕದ ಬಂಗಾರದ ಕೊರಳಚೈನ್, 2.5 ಗ್ರಾಂ ತೂಕದ ಬಂಗಾರದ ಡ್ರಾಪ್ ಗುಂಡುಗಳು ಸೇರಿ ಒಟ್ಟು 15 ಗ್ರಾಂ ತೂಕದ ಬಂಗಾರದ ಆಭರಣಗಳು ಕಳ್ಳತನವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳತನ ಮಾಡಿದ ಮೂವರ ಪೈಕಿ ಇಬ್ಬರನ್ನು ಬಂಧಿಸಿದ್ದು, ಒರ್ವ ಪರಾರಿಯಾಗಿದ್ದಾನೆ ಎಂದು ಎಸ್ಪಿ ರೋಹನ್ ಜಗದೀಶ್ ಮಾಹಿತಿ ನೀಡಿದರು.

ಅವರು ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅದೇ ದಿನ ಆದರಹಳ್ಳಿ ಗ್ರಾಮದ ಬಸ್ ಸ್ಟ್ಯಾಂಡ್ ಹತ್ತಿರ ಇರುವ ಮಾನಪ್ಪ ಸಣ್ಣರಾಮಪ್ಪ ವಡ್ಡರ, ಇವರ ಗ್ರಾಮ ಒನ್ ಆನ್ಲೈನ್ ಸೆಂಟರ್ ಅಂಗಡಿ ಕೀಲಿ ಮುರಿದು ಅಂಗಡಿಯಲ್ಲಿದ್ದ ಒಟ್ಟು 18 ಸಾವಿರ ರೂ. ಮೊತ್ತದ ಒಂದು ಲ್ಯಾಪ್ಟಾಪ್ ಹಾಗೂ ಅದರ ಚಾರ್ಜರ್ ಸಮೇತ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಮಂಗೇಶ ಮಾಮಲೇಶಪ್ಪ ಲಮಾಣಿ ಲಕ್ಷ್ಮೇಶ್ವರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಅಧಿಕಾರಿಗಳು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿತರ ಪೈಕಿ ಆರೋಪಿ ಎ 1 ಮತ್ತು ಎ 2 ಆರೋಪಿಗಳನ್ನು ಜುಲೈ 17 ರಂದು ಬಂಧಿಸಲಾಗಿದೆ. ಜೊತೆಗೆ, ಲಕ್ಷೇಶ್ವರ, ಶಿರಹಟ್ಟಿ. ಮುಳಗುಂದ ಮತ್ತು ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮನೆಗಳ್ಳತನ ಹಾಗೂ ಮೋಟಾರ್ ಸೈಕಲ್ ಕಳ್ಳತನ ಮಾಡಿದ ಪ್ರಕರಣಗಳಲ್ಲಿ ಆರೋಪಿತರಿಂದ ಒಂದು ಹೊಂಡಾ ಶೈನ್ ಬೈಕ್, ಎರಡು ಬಜಾಜ್ ಪಲ್ಸರ್ ಬೈಕ್, ಒಂದು ಹಿರೋ
ಎಚ್.ಎಫ್.ಡಿಲೆಕ್ಸ್ ಕಂಪೆನಿಯ ಬೈಕ್ ಸೇರಿ ಒಟ್ಟು 4 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಅಂತ ತಿಳಿಸಿದರು.
12 ಲಕ್ಷ ರೂ ಮೌಲ್ಯದ 122.5 ಗ್ರಾಂ ಬಂಗಾರದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, 20 ಸಾವಿರ ರೂ ಮೌಲ್ಯದ 150 ಗ್ರಾಂ ಬೆಳ್ಳಿಯ ಆಭರಣಗಳು ಹಾಗೂ 2000 ಮೊತ್ತದ ಎರಡು ಮೊಬೈಲ್ ಮತ್ತು 28 ಸಾವಿರ ರೂ ಮೌಲ್ಯದ 2 ಲ್ಯಾಪ್ಟಾಪ್ಗಳು ಸೇರಿ ಒಟ್ಟು 14 ಲಕ್ಷ 50 ಸಾವಿರ ರೂ ಮೌಲ್ಯದ ಬಂಗಾರ, ಬೆಳ್ಳಿ, ಲ್ಯಾಪ್ಟಾಪ್, ಬೈಕ್ ಹಾಗೂ ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಅಂತ ತಿಳಿಸಿದರು. ಪ್ರಕರಣ ಭೇದಿಸುವಲ್ಲಿ ಶ್ರಮಿಸಿದ ಅಧಿಕಾರಿಗಳಿಗೆ ಸೂಕ್ತ ಬಹುಮಾನ ನೀಡಲಾಗುವುದು ಅಂತ ಎಸ್ಪಿ ರೋಹನ್ ಜಗದೀಶ್ ಘೋಷಣೆ ಮಾಡಿದರು.

