ಲಕ್ಷ್ಮೇಶ್ವರ : ಬಟ್ಟೂರ ಗ್ರಾಮದ ಬಸಪ್ಪ ಸಾವಿರಕುರಿ ಇವರ ಹೊಲದಲ್ಲಿ
ಗೋವಿನಜೋಳ ಬೆಳೆಯಲ್ಲಿ ಡ್ರೋನ್ ಮೂಲಕ ನ್ಯಾನೋ ಯೂರಿಯಾ ಸಿಂಪರಣೆ ಪ್ರಾತ್ಯಕ್ಷಿಕೆಯನ್ನು ಉಪ ಕೃಷಿ ನಿರ್ದೇಶಕರು, ಗದಗ ಇವರ ನೇತೃತ್ವದಲ್ಲಿ ಜರುಗಿತು.
ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ
ಸ್ಪೂರ್ತಿ ಜಿ ಎಸ್ ಉಪ ಕೃಷಿ ನಿರ್ದೇಶಕರು ಮಾತನಾಡಿ ನ್ಯಾನೋ ಯೂರಿಯಾ ಶೇ.4 ಸಾರಜನಕ ಹೊಂದಿದೆ ನ್ಯಾನೋ ಡಿಎಪಿ ಶೇ.8 ಸಾರಜನಕ ಮತ್ತು ಶೇ.16 ರಂಜಕ ಹೊಂದಿದ್ದು, ಬೆಳೆಗೆ ಪೋಷಕಾಂಶ ಒದಗಿಸಿ ಇಳುವರಿ ಹೆಚ್ಚಿಸುತ್ತದೆ. ಕೈಯಿಂದ ಗೊಬ್ಬರ ಹಾಕುವುದರಿಂದ ಶೇ.30ರಷ್ಟು ಮಾತ್ರ ಬೆಳೆಗಳಿಗೆ ಬಳಕೆಯಾಗುತ್ತದೆ. ನ್ಯಾನೋ ಯೂರಿಯಾ/ಡಿಎಪಿಯನ್ನು ಡ್ರೋನ್ ಅಥವಾ ಸ್ಪ್ರೇಯರ್ ಮೂಲಕ ಸಿಂಪಡಿಸಿದರೆ ಶೇ.80 ರಷ್ಟು ಬೆಳೆಗಳಿಗೆ ತಲುಪುತ್ತದೆ ಎಂದು ತಿಳಿಸಿದರು.
ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ್ ಮಾತನಾಡಿ ಒಂದು ಎಕರೆ ವ್ಯಾಪ್ತಿಯನ್ನು ಡ್ರೋನ್ ಮೂಲಕ 6 ರಿಂದ 8 ನಿಮಿಷದಲ್ಲಿ ಸಿಂಪಡಣೆ ಮಾಡಬಹುದು. ಎಕರೆ ಸಿಂಪಡಣೆ ಮಾಡಲು 400 ರೂ. ಶುಲ್ಕ ನಿಗದಿ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪಿ ಕೆ ಹೊನ್ನಪ್ಪನವರ್ , ಸಹಾಯಕ ಕೃಷಿ ಅಧಿಕಾರಿ , ದೇವರಾಜ್ ಆಚಲಕರ್, ಮಹೇಶ್ ನಂದೆಣ್ಣವರ್, ಹರೀಶ್ ಭದ್ರಾಪೂರ್ , ಗ್ರಾಮದ ಪ್ರಮುಖರಾದ ಜಗದೇಶಗೌಡ ಪಾಟೀಲ್, ಪರಸಪ್ಪ ಇಮ್ಮಡಿ, ಪಿಡಿಒ ಮಾದರ್, ಹೊಳಲಾಪುರ ಹಾಗೂ ಗ್ರಾಮದ ರೈತರು ಹಾಜರಿದ್ದರು.

