ಸೂಡಿ ಗ್ರಾಪಂ ಅಧ್ಯಕ್ಷ ಚುನಾವಣೆಯಲ್ಲಿ ಹೈಡ್ರಾಮಾ : ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾಂಗ್ರೆಸ್ ಬೆಂಬಲಿತರು:ಅಡ್ಡ ಮತದಾನ ಮಾಡಿದ ೩ ಸದಸ್ಯರು

Samagraphrabha
2 Min Read

ಗಜೇಂದ್ರಗಡ : ತಾಲೂಕಿನ ಸೂಡಿ ಗ್ರಾಮ ಪಂಚಾಯತ್‌ನಲ್ಲಿ ಬಹುಮತದ ತೂಗುಯ್ಯಾಲೆಯಲ್ಲಿ ತೇಲಾಡಿ ಅಧ್ಯಕ್ಷ ಸ್ಥಾನದ ಕನಸು ಕಂಡಿದ್ದ ಕಾಂಗ್ರೆಸ್‌ಗೆ ಅಡ್ಡ ಮತದಾನವೆಂಬ ಗುಮ್ಮ ಕಾಡಿದ ಪರಿಣಾಮ ಬಿಜೆಪಿ ಕೈಗೆ ಅಧಿಕಾರದ ಗದ್ದುಗೆ ಸಲೀಸಾಗಿ ಸಿಕ್ಕಿದೆ.

ಸೋಮವಾರ ನಡೆದ ಸೂಡಿ ಗ್ರಾಪಂ ಚುನಾವಣೆಯಲ್ಲಿ ಹಲವು ಹೈಡ್ರಾಮಾಗಳ ನಡುವೆಯೂ ಅಚ್ಚರಿಯ ರೀತಿಯಲ್ಲಿ ಕಮಲಕ್ಕೆ ಅಧಿಕಾರದ ಗದ್ದುಗೆ ಸಿಕ್ಕಿದೆ.

ಕಾಂಗ್ರೆಸ್ ಬೆಂಬಲಿತ ಸದಸ್ಯರಿಂದ ರಾಜೀನಾಮೆ :
ಕಾಂಗ್ರೇಸ್ ಗೆ ಸ್ಪಷ್ಟವದ ಬಹುಮತ ವಿದ್ದರು ಅಡ್ಡ ಮತದಾನ ಮಾಡಿದ್ದರಿಂದ ಸಿಡಿಮಿಡಿಗೊಂಡ ಕಾಂಗ್ರೆಸ್ ಸದಸ್ಯರು ಹಾಗೂ ಕಾರ್ಯಕರ್ತರು ರಾಜೀನಾಮೆ ಪರ್ವ ಆರಂಭಿಸಿದರು.

ರೋಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಶೆಟ್ಟರ್ ನಿವಾಸದಲ್ಲಿ ಸಭೆ ಸೇರಿದ ಮುಖಂಡರು ಸದಸ್ಯರಿಗೆ ರಾಜೀನಾಮೆ ಸಲ್ಲಿಸುವಂತೆ ಪಟ್ಟು ಹಿಡಿದರು ಮುಖಂಡರು ಹಾಗೂ ಕಾರ್ಯಕರ್ತರ ಮಾತಿಗೆ ಕಟ್ಟು ಬಿದ್ದ ೧೦ ಸದಸ್ಯರು ಪಂಚಾಯತ್‌ಗೆ ಆಗಮಿಸಿ ಉಪಾಧ್ಯಕ್ಷೆ ಕನಕವ್ವ ಮಾದರ ಅವರಿಗೆ ರಾಜೀನಾಮೆ ಸಲ್ಲಿಸಿದರು.

- Advertisement -
Ad image

ಅಡ್ಡ ಮತದಾನ ಕೈ ಯಿಂದ ಕಮಲ ಅಧಿಕಾರ:
೧೭ ಸದಸ್ಯ ಬಲದ ಸೂಡಿ‌ಗ್ರಾಮ ಪಂಚಾಯತ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಗಂಗವ್ವ ಶರಣಪ್ಪ ಗೊರವರ ಸ್ಪರ್ಧೆ ಮಾಡಿದ್ದರೆ, ಬಿಜೆಪಿಯಿಂದ ಆಯಿಶಾಬೇಗಂ ಬುಡ್ನೇಸಾಬ ಮೊಕಾಶಿ ಸ್ಪರ್ಧಿಸಿದ್ದರು. ಕಾಂಗ್ರೆಸ್ ಬೆಂಬಲಿತ ೧೧ ಸದಸ್ಯರು ಹಾಗೂ ಬಿಜೆಪಿ ಬೆಂಬಲಿತ ೬ ಸದಸ್ಯರು ಗ್ರಾಪಂನಲ್ಲಿದ್ದರು. ಆದರೆ, ಮೂವರು ಕಾಂಗ್ರೆಸ್ ಬೆಂಬಲಿತರು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದರಿಂದ ೯ ಮತ ಪಡೆದ ಆಯಿಶಾಬೇಗಂ ಬುಡ್ನೇಸಾಬ ಮೊಕಾಶಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದರು.

ಬಿಜೆಪಿ ಅಭ್ಯರ್ಥಿಗೆ ಕಾಂಗ್ರೆಸ್ ಸದಸ್ಯರು ಮತ ಹಾಕಿದ ವಿಷಯ ತಿಳಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಸದಸ್ಯರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಏಕವಚನದಲ್ಲಿ ನಿಂದಿಸಿದರು. ಪಕ್ಷಕ್ಕೆ ದ್ರೋಹ ಬಗೆದ ನಿಮ್ಮನ್ನು ಯಾವತ್ತೂ ಕ್ಷಮಿಸುವುದಿಲ್ಲ ಎಂದು ಶಪಿಸುತ್ತಾ ಹಿಡಿಶಾಪಹಾಕಿದರು.
ಅಡ್ಡ ಮತದಾನ ಮಾಡಿದವರು ಯಾರು ಎಂದು ಮುಖಂಡರು ಎಷ್ಟೇ ಪ್ರಶ್ನೆ ಮಾಡಿದರೂ ಯಾರೊಬ್ಬರು ತಪ್ಪು ಒಪ್ಪಿಕೊಳ್ಳಲಿಲ್ಲ ಹೀಗಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಶೆಟ್ಟರ್ ನಿವಾಸದಲ್ಲಿ ಸಭೆ ಸೇರಿ ಆಣೆ ಪ್ರಮಾಣಕ್ಕೂ ಮುಂದಾದರು ಆದರೂ ಯಾರೊಬ್ಬರು ತಮ್ಮ ತಪ್ಪು ಒಪ್ಪಿಕೊಳ್ಳಲಿಲ್ಲ ಇದರಿಂದ ಎಲ್ಲ ಸದಸ್ಯರು ಒಮ್ಮತದಿಂದ ರಾಜೀನಾಮೆ ಸಲ್ಲಿಸುವ ಇಂಗಿತ ವ್ಯಕ್ತಪಡಿಸಿದರು. ವೀರಣ್ಣ ಶೆಟ್ಟರ್ ನಿವಾಸದಿಂದ ಗ್ರಾಮ ಪಂಚಾಯತ್ ಗೆ ಆಗಮಿಸಿದ ಸದಸ್ಯರು ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷೆಗೆ ರಾಜೀನಾಮೆ ಸಲ್ಲಿಸಿದರು ಜತೆಗೆ ಮುಂದಿನ ಕ್ರಮಕ್ಕಾಗಿ ಪಿಡಿಒಗೆ ಮನವಿ ಸಲ್ಲಿಸಿದರು ಇದರಿಂದ ಸೂಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನದ ಚುನಾವಣೆ ಹಲವು ಹೈಡ್ರಾಮಾಗಳಿಗೆ ಸಾಕ್ಷಿಯಾಯಿತು.

Share this Article