ಗಜೇಂದ್ರಗಡ : ತಾಲೂಕಿನ ಸೂಡಿ ಗ್ರಾಮದ ಚಿದಂಬರೇಶ್ವರ ದೇವಸ್ಥಾನದ ಹತ್ತಿರ ಇರುವ ಸೂಡಿ ಯಿಂದ ಕಳಕಾಪುರ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡು ಬದಿಯಲ್ಲಿ ನೆಟ್ಟಿರುವಂತಹ ಅರಳಿ, ರೈನ್‌ಟ್ರಿ, ಶಿಶುಮರ, ಕೆಂಜಗದಮರ, ಬಾಗೆ ಮರ, ಬೇವಿನ ಮರಗಳು ಸೊಂಪಾಗಿ ಬೆಳೆದು ನೋಡುಗರ ಕಣ್ಮನ ಸೆಳೆಯುತ್ತಿವೆ.
ಸೂಡಿ ಗ್ರಾಮದ ಕಳಕಾಪುರ್ ರಸ್ತೆ ಬದಿಯಲ್ಲಿ ಕಾಲಿಡುತ್ತಿದ್ದಂತೆಯೇ ಹಸಿರು ಕಾಣಿಸಿಕೊಳ್ಳುತ್ತದೆ. ಬೇಸಿಗೆಯ ಬಿಸಿಯ ಝಳ ಹೆಚ್ಚಿದ್ದರೂ ಈ ಪ್ರದೇಶದಲ್ಲಿ ತಂಪಾದ ಅನುಭವವಾಗುತ್ತದೆ. ಕಾರಣ ಇಲ್ಲಿ ಬೆಳೆಸಿರುವ ನೂರಾರು ಗಿಡ ಮರಗಳು ಬೆಳೆದು ನೆರಳು ನೀಡುತ್ತಿದ್ದು, ಕೂಲ್ ಕೂಲ್ ವಾತಾವರಣ ನಿರ್ಮಾಣವಾಗಿದೆ.
ಸುಮಾರು 10 ವರ್ಷಗಳ ಹಿಂದೆ ಸಸಿಯಾಗಿ ನೆಟ್ಟಿರುವ ಮರಗಳು ಇಂದು ದಣಿದವರಿಗೆ ನೆರಳಾಗುವಂತಹ ಹೆಮ್ಮರವಾಗಿ ಬೆಳೆದು ನಿಂತಿವೆ.
ದ್ವಿಚಕ್ರ ವಾಹನ ಸೇರಿದಂತೆ ಇತರೆ ವಾಹನಗಳಲ್ಲಿ ಜನರು ಈ ದಾರಿಯಲ್ಲಿ ಸಂಚರಿಸುತ್ತಾ ತಂಪಾದ ವಾತಾವರಣದಲ್ಲಿ ಸ್ವಲ್ಪ ಹೊತ್ತು ಕುಳಿತು ವಿಶ್ರಾಂತಿ ಪಡೆದು ಮುಂದೆ ನಡೆಯುವಂತಹ ವಾತಾವರಣ ಸೃಷ್ಟಿಸಿವೆ ಈ ಮರಗಳು.
ಮಹಿಳೆಯರಿಗೆ ಮತ್ತು ವೃದ್ಧರಿಗೆ ಪ್ರಿಯವಾದ ತಾಣ
ದಿನನಿತ್ಯ ಗ್ರಾಮದ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಈ ರಸ್ತೆಯಲ್ಲಿ ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ವ್ಯಾಯಾಮ ವಾಕಿಂಗ್ ವಿಶ್ರಾಂತಿಯನ್ನು ಪಡೆಯಲು ಇದು ಪ್ರಿಯವಾದ ತಾಣವಾಗಿದೆ.
ಗರ್ಭಿಣಿಯರು, ವೃದ್ಧರು ಯೋಗ ವ್ಯಾಯಾಮವನ್ನು ಮಾಡುತ್ತಾ ಉತ್ತಮ ಪರಿಸರದ ಗಾಳಿಯನ್ನು ಪಡೆದುಕೊಳ್ಳುವುದರ ಜೊತೆಗೆ ದಿನ ನಿತ್ಯ ರೈತರು ತಮ್ಮ ಜಮೀನಿನುಗಳಲ್ಲಿ ಜಾನುವಾರುಗಳನ್ನು ಮೇವು ಮೇಯಲು ಬಿಟ್ಟು ಈ ಮರಗಳ ನೆರಳಿನಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಾರೆ.
ರಸ್ತೆ ಬದಿಯಲ್ಲಿರುವ ಈ ಮರಗಳ ತಂಪಾದ ವಾತಾವರಣದಿಂದಾಗಿ ಪಕ್ಷದ ರೈತರ ಜಮೀನಿನ ಬೆಳೆಗಳು ಹಸಿರಿನಿಂದ ಕಂಗೊಳಿಸುತ್ತವೆ. ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಇಲ್ಲಿ ಗಿಡಗಳನ್ನು ನೆಟ್ಟಿರುವುದರಿಂದ ನೀರು ಇಂಗುವ ಮೂಲಕ ಸದಾ ವಾತಾವರಣ ತಂಪಾಗಿ ಸುತ್ತ ಮುತ್ತಲಿನ ಅಂತರ್ಜಲ ಮಟ್ಟವೂ ಹೆಚ್ಚಿದೆ.
ಸೂಡಿಯಿಂದ ಕಳಕಾಪುರ್ ವರೆಗೂ ಕೆಟ್ಟ ರಸ್ತೆ
ಕಳಕಾಪುರ್ ರಸ್ತೆಯನ್ನು 2014-15 ರಲ್ಲಿ ನಿರ್ಮಾಣ ಮಾಡಿದ್ದು ಈ ರಸ್ತೆಯಲ್ಲಿ ಹೆಚ್ಚಾಗಿ ರೈತರು, ದ್ವಿಚಕ್ರ ವಾಹನಗಳು ಸಂಚರಿಸುತ್ತವೆ ಆದರೆ ಈ ರಸ್ತೆಯು ಸಂಪೂರ್ಣ ಕೆಟ್ಟು ಹೋಗಿದ್ದು ಈ ರಸ್ತೆಯಲ್ಲಿ ನಡೆದುಕೊಂಡು ಹೋಗಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ ರಸ್ತೆ ಪೂರ್ಣ ಹಾಳಾಗಿದ್ದು ದೊಡ್ಡ ದೊಡ್ಡ ಗುಂಡಿಗಳಿಂದ ಕೂಡಿದೆ. ಸ್ಥಳೀಯ ಜನಪ್ರತಿನಿಧಿಗಳು ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆಯ ಗುಂಡಿಗಳಿಗೆ ಮುಕ್ತಿ ನೀಡಬೇಕು, ರಸ್ತೆ ಸುಧಾರಣೆಗೆ ಮುಂದಾಗಬೇಕು.
ಸುಮಾರು 15 ವರ್ಷಗಳ ಹಿಂದೆ ಸಾಮಾಜಿಕ ಅರಣ್ಯ ಇಲಾಖೆ ರಸ್ತೆಯ ಎರಡೂ ಬದಿಯಲ್ಲೂ ಗಿಡಗಳನ್ನು ನೆಟ್ಟು ಪೋಷಿಸಿರುವುದರಿಂದ ಇಂದು ಹೆಮ್ಮರವಾಗಿ ಬೆಳೆದು ಹಸಿರಿನಿಂದ ಕೂಡಿದ್ದು, ತಂಪಾದ ವಾತಾವರಣ ಕಲ್ಪಿಸಿದೆ. ಇಲ್ಲಿ ಸಂಚರಿಸುವಂತಹ ಮಹಿಳೆಯರು, ಮಕ್ಕಳು, ವೃದ್ಧರು ಹಾಗೂ ರೈತರು, ಜಾನುವಾರುಗಳಿಗೆ ವಿಶ್ರಾಂತಿ ಪಡೆಯಲು ಇದು ಸೂಕ್ತ ತಾಣವಾಗಿ ಮಾರ್ಪಟ್ಟಿದೆ. ಇಂತಹ ಮರಗಳನ್ನು ಗ್ರಾಮದ ಎಲ್ಲಾ ರಸ್ತೆಗಳ ಬದಿಗಳಲ್ಲಿ ನೆಟ್ಟು ಉತ್ತಮ ಪರಿಸರವನ್ನು ನಿರ್ಮಿಸಬೇಕು.
ಸಂಗಮೇಶ ಅಬ್ಬಿಗೇರಿ, ಸ್ಥಳೀಯ ಪರಿಸರ ಪ್ರೇಮಿ
ತಾಲೂಕಿನ ಸೂಡಿ ಗ್ರಾಮದಿಂದ ಕಳಕಾಪುರ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವರೆಗೆ ಸುಮಾರು 15 ವರ್ಷಗಳಿಂದ ಸಾಮಾಜಿಕ ವಲಯ ಅರಣ್ಯ ಇಲಾಖೆ ರಸ್ತೆ ಎರಡೂ ಬದಿಯಲ್ಲೂ ಗಿಡಗಳನ್ನು ನೆಟ್ಟು ಪೋಷಿಸಿದ್ದು, ಇಂದು ಹೆಮ್ಮರವಾಗಿ ಬೆಳೆದು ನೆರಳು ನೀಡುತ್ತಿವೆ. ಅಲ್ಲದೆ ಇತ್ತೀಚಿನ ದಿನಗಳಲ್ಲೂ ರಸ್ತೆ ಬದಿಗಳಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದೇವೆ. ಇದನ್ನು ರೈತರು ಜಾನುವಾರುಗಳಿಂದ ರಕ್ಷಣೆ ಮಾಡಿ ಕಾಪಾಡಿಕೊಂಡರೆ ಮುಂದಿನ ದಿನಗಳಲ್ಲಿ ಉತ್ತಮ ಪರಿಸರ ಸಿಗುವುದರ ಜತೆಗೆ ಉತ್ತಮ ಮಳೆ ಗಾಳಿ ದೊರಕಲಿದೆ.
ಪ್ರವೀಣಕುಮಾರ್ ಸಾಸ್ವಿಹಳ್ಳಿ , ತಾಲೂಕಾ ಸಾಮಾಜಿಕ ವಲಯ ಅರಣ್ಯಾಧಿಕಾರಿ ಗಜೇಂದ್ರಗಡ.

