ವೇತನಕ್ಕೆ ಆಗ್ರಹಿಸಿ ಅಸಹಕಾರ ಚಳುವಳಿ

Samagraphrabha
1 Min Read

ನರೇಗಾ ಹೊರಗುತ್ತಿಗೆ ಸಿಬ್ಬಂದಿ 6 ತಿಂಗಳ ಸಂಬಳ ಬಾಕಿ

ಗದಗ: 6 ತಿಂಗಳಿಂದ ವೇತನ ಪಾವತಿಯಾಗದ ಕಾರಣ ಜುಲೈ 8ರಿಂದ ಎಲ್ಲ ನರೇಗಾ ಕಾರ್ಯಗಳನ್ನು ಸ್ಥಗಿತಗೊಳಿಸಿ ಅಸಹಕಾರ ಚಳುವಳಿ ಮಾಡಲು ನಿರ್ಧರಿಸಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ತಾಲೂಕು ವ್ಯಾಪ್ತಿಯ ಹೊರಗುತ್ತಿಗೆ ನೌಕರರು ಶನಿವಾರ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಯ್ಯ ಕೊರವನವರ ಅವರಿಗೆ ಮನವಿ ಸಲ್ಲಿಸಿದರು.

ಕೂಲಿಕಾರರಿಗೆ ನರೇಗಾ ಕೆಲಸ ಕೊಡಿಸುವುದು, ಯೋಜನೆಯಡಿ ಹಳ್ಳಿಗಳಲ್ಲಿ ಆಸ್ತಿ ಸೃಜನೆಗಳಲ್ಲಿ ನರೇಗಾ ನೌಕರರ ಪಾತ್ರ ಬಹುಮುಖ್ಯವಾಗಿದೆ. ಆದರೆ, ನೌಕರರಿಗೆ ಪ್ರತಿ ತಿಂಗಳು ವೇತನ ಸರಿಯಾಗಿ ಆಗದೆ ತುಂಬಾ ಸಮಸ್ಯೆ ಎದುರಿಸುತ್ತಿದ್ದಾರೆ. ಮಕ್ಕಳ ಶಾಲಾ ದಾಖಲಾತಿ, ಕುಟುಂಬದ ನಿರ್ವಹಣೆ, ಕೌಟುಂಬಿಕ ಆರೋಗ್ಯ ಸಮಸ್ಯೆಗೆ ವೇತನ ಪಾವತಿಯಾಗದೆ ಇರುವುದು ನಾನಾ ಸಮಸ್ಯೆ ಕಾರಣವಾಗಿದೆ. ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ತಾಲೂಕು ಹಂತದಲ್ಲಿ ಟಿಐಇಸಿ, ಟಿಸಿ, ಟಿಎಂಐಎಸ್, ಟಿಎಇ (ಸಿವಿಲ್, ತೋಟಗಾರಿಕೆ, ರೇಷ್ಮೆ, ಅರಣ್ಯ, ಕೃಷಿ) ವಿಭಾಗದಲ್ಲಿ ಹಾಗೂ ಬಿಎಫ್‌ಟಿ ಸೇರಿ ವಿವಿಧ ಹುದ್ದೆಗಳಲ್ಲಿ 25ಕ್ಕೂ ಹೆಚ್ಚು ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಎಲ್ಲ ನರೇಗಾ ಯೋಜನೆಯ ಸಿಬ್ಬಂದಿಗೆ ಕಳೆದ 6 ತಿಂಗಳಿಂದ ವೇತನ ಪಾವತಿಯಾಗಿಲ್ಲ. ಸರ್ಕಾರ ಕೂಡಲೇ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು. ವೇತನ ಪಾವತಿ ವಿಳಂಬವಾಗದಂತೆ ನೋಡಿಕೊಳ್ಳಬೇಕು. ಈ ಹಿಂದೆಯೂ ಸರ್ಕಾರದ ಗಮನಕ್ಕೆ ತರಲು ಪ್ರತಿಭಟನೆ ಮಾಡಿದ್ದೇವೆ ಈಗ ನರೇಗಾ ಕಾಮಗಾರಿಯನ್ನು ಸ್ಥಗಿತಗೊಳಿಸಿ ಅಸಹಕಾರ ಚಳುವಳಿ ಮಾಡಲು ರಾಜ್ಯ ಮತ್ತು ಜಿಲ್ಲಾ ಸಂಘದ ನಿರ್ದೇಶನ ಮುಂದಾಗಿದ್ದೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಸಂಘದ ತಾಲೂಕು ಪ್ರತಿನಿಧಿಗಳಾದ ವೀರೇಶ ಬಸನಗೌಡ್ರ, ಚಂpದ್ರಶೇಖರ ಹಳ್ಳಿ, ನವೀನ ಬಸರಿ, ಪ್ರದೀಪ ನರೇಗಲ್ಲ, ಮಂಜುನಾಥ ಕುಲಕರ್ಣಿ, ಸೋಮಶೇಖರ ತುರಬಿನ, ಸಿದ್ದಪ್ಪ ಸೋಮನಕಟ್ಟಿ ಇತರರು ಇದ್ದರು.

- Advertisement -
Ad image

Share this Article