ನವಲಗುಂದ ಪೊಲೀಸರ ಭರ್ಜರಿ ಬೇಟೆ

Samagraphrabha
2 Min Read

ನವಲಗುಂದ: ಚಿನ್ನ ಮತ್ತು ಬೆಳ್ಳಿ ಆಭರಣಕ್ಕೆ ಸಂಬಂಧಪಟ್ಟಂತೆ 5 ಪ್ರಕರಣಗಳನ್ನು ಬೇಧಿಸಿದ ಪಟ್ಟಣದ ಪೊಲೀಸರು ಅಂದಾಜು 26 ಲಕ್ಷದ 28 ಸಾವಿರ ರೂ. ಬೆಲೆಬಾಳುವ ಒಟ್ಟು 267 ಗ್ರಾಂ ಚಿನ್ನ ಹಾಗೂ 470 ಗ್ರಾಂ ತೂಕದ ಬೆಳ್ಳಿ ಆಭರಣಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರವಾಹನಗಳನ್ನು ಕಳ್ಳರಿಂದ ವಶಪಡಿಸಿಕೊಂಡಿದ್ದಾರೆ.

ಶುಕ್ರವಾರ ಸಂಜೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ್ ಅವರು, ಕೃತ್ಯಕ್ಕೆ ಸಂಬಂಧಿಸಿದಂತೆ ಒಟ್ಟು 6 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.

ನವಲಗುಂದ ಜೋಶಿ ಪ್ಲಾಟ್‌ನಲ್ಲಿ 30 ಗ್ರಾಂ ಚಿನ್ನ, 200 ಗ್ರಾಂ ಬೆಳ್ಳಿ ಆಭರಣ, ಒಂದು ಮೊಬೈಲ್, ಗುಡ್ಡದಕೇರಿ ಗೊಲ್ಲರ ಓಣಿಯಲ್ಲಿ 15 ಗ್ರಾಂ ಚಿನ್ನ, 140 ಗ್ರಾಂ ಬೆಳ್ಳಿ, ದಾಟನಾಳ ಗ್ರಾಮದಲ್ಲಿ 35 ಗ್ರಾಂ ಚಿನ್ನ, 60 ಗ್ರಾಂ ಬೆಳ್ಳಿ ಆಭರಣ, ತಡಹಾಳ ಗ್ರಾಮದಲ್ಲಿ 162 ಗ್ರಾಂ ಚಿನ್ನದ ಆಭರಣ ಹಾಗೂ ಸವದತ್ತಿ ತಾಲಕು ಹಿರೇಕುಂಬಿ ಗ್ರಾಮದಲ್ಲಿ 25 ಗ್ರಾಂ ಚಿನ್ನ ಹಾಗೂ 70 ಗ್ರಾಂ ಬೆಳ್ಳಿ ಆಭರಣ ಕಳವು ಪ್ರಕರಣ ಬೇಧಿಸಿ 26 ಲಕ್ಷ 28 ಸಾವಿರ ಮೊತ್ತದ ಚಿನ್ನ ಮತ್ತು ಬೆಳ್ಳಿ ಆಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿಯವರು ವಿವರ ನೀಡಿದರು.

ಸಲ್ಮಾ ಅನ್ವರ್ ಹುಸೇನ್ ಕೆರೂರ ಎಂಬುವವರು ದೂರು ನೀಡಿದ್ದರ ಹಿನ್ನೆಲೆಯಲ್ಲಿ ಕಳ್ಳತನ ಪ್ರಕರಣ ಬೇಧಿಸಲು ತಂಡವನ್ನು ರಚಿಸಲಾಗಿತ್ತು. ಎ.ಎಸ್ಪಿ ನಾರಾಯಣ ಭರಮಣಿ, ಡಿವೈಎಸ್ಪಿ ವಿನೋದ ಮುತ್ತೇದಾರ, ಸಿಪಿಐ ರವಿಕುಮಾರ ಕಪ್ಪತ್ತನವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಜನಾರ್ಧನ ಭಟ್ರಳ್ಳಿ, ವಿ.ಎಚ್ ಹತ್ತಳ್ಳಿ ನೇತೃತ್ವದ 20 ಕ್ಕೂ ಹೆಚ್ಚು ಸಿಬ್ಬಂದಿ ಒಳಗೊಂಡ ತಂಡವು ಕಳ್ಳರ ಜಾಲ ಬೇಧಿಸಿ ಬಂಧಿಸಿದೆ ಎಂದು ಹೇಳಿದರು.

- Advertisement -
Ad image

ತಡಹಾಳ ಗ್ರಾಮದಲ್ಲಿಯೇ ಅತೀ ಹೆಚ್ಚು ಅಂದರೆ 162 ಗ್ರಾಂ ಚಿನ್ನಾಭರಣವನ್ನು ಕಳ್ಳರು ಕಳವು ಮಾಡಿದ್ದರು. ಈ
ಆಭರಣ ಕಳ್ಳತನ ಪ್ರಕರಣಗಳಿಂದ ನವಲಗುಂದ ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರಿಗೆ ಅಭದ್ರತೆ ಭಾವ ಆವರಿಸಿತ್ತು, ತಮ್ಮ ತಮ್ಮ ಸ್ವತ್ತಿನ ಸುರಕ್ಷತೆಯ ಬಗ್ಗೆ ಆತಂಕಗೊಂಡಿದ್ದರು. ಈಗ ಕಳ್ಳರ ತಂಡವನ್ನು ಪತ್ತೆ ಮಾಡಿದ್ದು, ಕಳ್ಳತನ ಮಾಡಿದ್ದ ಆಭರಣವನ್ನೂ ವಶಪಡಿಸಿಕೊಳ್ಳಲಾಗಿದೆ. ಸಾರ್ವಜನಿಕರು ಆತಂಕ ಪಡಬೇಕಿಲ್ಲ ಎಂದು ತಿಳಿಸಿದರು.

ಕಳ್ಳತನ ಪ್ರಕರಣ ಕುರಿತು ಹೆಚ್ಚಿನ ವಿಚಾರಣೆ ನಡೆದಿದ್ದು, ಇನ್ನೂ ಈ ಕೃತ್ಯದಲ್ಲಿ ಹೆಚ್ಚಿನವರು ಇದ್ದಾರೆಯೇ, ಮತ್ತೆಲ್ಲಿ ಇಂತಹ ಕೃತ್ಯ ಎಸಗಿದ್ದಾರೆ ಎಂಬುದರ ಕುರಿತು ತನಿಖೆ ನಡೆಸಲಾಗುವುದು ಎಂದು ಹೇಳಿದರು.

Share this Article