ಬೆಂಗಳೂರು, ಜೂ.5-ಆರ್ ಸಿಬಿ ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ ಪ್ರಕರಣ ಕುರಿತಂತೆ ಬೆಂಗಳೂರು ಪೊಲೀಸ್ ಕಮಿಷನರ್ ಸೇರಿದಂತೆ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ ಪೊಲೀಸ್ ಕಮಿಷನರ್ ಬಿ.ದಯಾನಂದ್, ಹೆಚ್ಚುವರಿ ಕಮಿಷನರ್ ವಿಕಾಸ್ ಕುಮಾರ್, ಸೆಂಟ್ರಲ್ ಡಿಸಿಪಿ ಶೇಖರ್ ತೆಕ್ಕಣ್ಣನವರ್, ಎಸಿಪಿ ಬಾಲಕೃಷ್ಣ, ಇನ್ಸ್ಪೆಕ್ಟರ್ ಗಿರೀಶ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರ್ ಸಿ ಬಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಘಟನೆ ದು:ಖಕರವಾಗಿದ್ದು, ಮೃತಪಟ್ಟವರಿಗೆ ಸಂತಾಪ ಕೋರಲಾಯಿತು. ಇಂದು ಎಂದಿನಂತೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯದ ಕುರಿತು ಗಂಭೀರ ಚರ್ಚೆ ನಡೆಸಲಾಗಿದೆ. ನಿನ್ನೆ ನಡೆದ ಅಹಿತಕರ ಘಟನೆ ಬಗ್ಗೆ ಚರ್ಚಿಸಿ ಕೆಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ ಎಂದರು.
ಮೇಲ್ನೋಟಕ್ಕೆ ಈ ಅಧಿಕಾರಿಗಳ ಬೇಜವಾಬ್ದಾರಿತನ, ಅಲಕ್ಷ್ಯ ಕಂಡುಬರುತ್ತಿದ್ದು, ಇವರುಗಳನ್ನು ಅಮಾನತುಗೊಳಿಸಲು ತೀರ್ಮಾನಿಸಲಾಗಿದೆ ಈ ಘಟನೆ ನಮ್ಮನ್ನು ಘಾಸಿಗೊಳಿಸಿದೆ.ದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರುತ್ತಾ, ಕುಟುಂಬದವರ ಜೊತೆ ಸರ್ಕಾರವಿದೆ ಎಂದರು.

