ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದಲ್ಲಿ ಒಟ್ಟು 73.45 ಶೇ. ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 6,81,079 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 4,68,439 ಮಂದಿ ತೇರ್ಗಡೆಯಾಗಿದ್ದಾರೆ. ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ 93.90% ಸಾಧನೆ ಮಾಡುವ ಮೂಲಕ ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ ಎರಡನೇ ಸ್ಥಾನ ದಕ್ಷಿಣ ಕನ್ನಡ (93.57%), ಮೂರನೇ ಸ್ಥಾನವನ್ನು ಬೆಂಗಳೂರು ದಕ್ಷಿಣ(85.36%) ಪಡೆದುಕೊಂಡಿದೆ. ಕೊನೆ ಸ್ಥಾನ ಯಾದಗಿರಿ (73.45%) ಪಡೆದುಕೊಂಡಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ ಮೂಲಕ ಫಲಿತಾಂಶ ಪ್ರಕಟಿಸಿದ್ದಾರೆ.
ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ 57.11ರಷ್ಟು ಫಲಿತಾಂಶ ಬಂದಿದೆ. ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ 62.69ರಷ್ಟು, ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ 82.66ರಷ್ಟು, ಬಿಬಿಎಂಪಿ ವ್ಯಾಪ್ತಿಯ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ 68.88ರಷ್ಟು, ವಿಭಜಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ 78.58ರಷ್ಟು ಹಾಗೂ ವಸತಿ ಶಾಲಾ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ 86.18ರಷ್ಟು ಫಲಿತಾಂಶ ಪ್ರಕಟವಾಗಿದೆ.
ಪ್ರತಿವರ್ಷದಂತೆ ಈ ಬಾರಿಯೂ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಗೆ 3,45,694 ಬಾಲಕಿಯರು ಹಾಜರಾಗಿದ್ದರು. ಈ ಪೈಕಿ 2,69,212 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಶೇಕಡಾ 77.88ರಷ್ಟು ಬಾಲಕಿಯರು ಉತ್ತೀರ್ಣರಾದಂತಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆಗೆ 2,92,111 ಬಾಲಕರು ಹಾಜರಾಗಿದ್ದರು. ಈ ಪೈಕಿ 1,99,227 ಬಾಲಕರು ಉತ್ತೀರ್ಣರಾಗಿದ್ದಾರೆ.
ಪಿಯುಸಿ ಫಲಿತಾಂಶ 2025: ಆನ್ಲೈನ್ನಲ್ಲಿ ಪರಿಶೀಲಿಸುವುದು ಹೇಗೆ?
ಅಧಿಕೃತ ವೆಬ್ಸೈಟ್ಗೆ karresults.nic.in ಗೆ ಭೇಟಿ ನೀಡಬೇಕು.
