ಕಾರವಾರ : ಕೆಟ್ಟ ತಂದೆ ಇರಬಹುದು. ಆದರೆ ಕೆಟ್ಟ ತಾಯಿ ಇರಲಾರಳು ಎಂಬುದು ನಂಬಿಕೆ. ಅಮ್ಮ ಅಂದರೆ ಹಾಗೆ. ಆಕೆ ಎಂದೂ ತನ್ನ ಮಗುವಿಗೆ ಕೆಟ್ಟದಾಗುವುದನ್ನು ಬಯಸಲಾರಳು. ಆದರೆ ಕೆಲವೊಮ್ಮೆ ಈ ಮಾತು ಸತ್ಯವಾಗುವುದಿಲ್ಲ. ಇಂತಹ ಘಟನೆ ಯೊಂದು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ.
ದಾಂಡೇಲಿಯ ಹಾಲಮಡ್ದಿ ಸಮೀಪ ಮೊಸಳೆಗಳಿವೆ. ಕೆಲವೊಮ್ಮೆ ಈ ಮೊಸಳೆಗಳು ಊರಿಗೆ ಬಂದಿದ್ದೂ ಇದೆ. ಇಂತಹ ಪ್ರದೇಶದಲ್ಲಿ ಮಹಿಳೆಯೊಬ್ಬಳು ಸಿಟ್ಟಿನ ಬರದಲ್ಲಿ ತನ್ನ 6 ವರ್ಷದ ಮಗುವನ್ನು ಈ ನಾಲೆಗೆ ಎಸೆದು ಬಿಟ್ಟಿದ್ದಾಳೆ.
ಊರಿನ ಜನ ಓಡಿ ಬಂದಿದ್ದಾರೆ. ರಾತ್ರೆ ಇಡೀ ಮಗುವಿನ ರಕ್ಷಣೆಗಾಗಿ ಹುಡುಕಾಟ ನಡೆಸಿದ್ದಾರೆ.ಅದರೆ ಇಂದು ಬೆಳಿಗ್ಗೆ ಮಗು ಶವವಾಗಿ ದೊರಕಿದೆ.
ಊರಿನ ಜನರ ಹೇಳಿಕೆಯ ಪ್ರಕಾರ ಈ ದಂಪತಿಗಳು ಇತ್ತೀಚೆಗೆ ಇಲ್ಲಿನ ಬಾಡಿಗೆ ಮನೆಗೆ ಬಂದಿದ್ದರು. ಗಂಡ ಹೆಂಡತಿಯ ನಡುವೆ ಆಗಾಗ ಜಗಳವೂ ಆಗುತ್ತಿತ್ತು. ಗಂಡನ ಜೊತೆಗಿನ ಜಗಳದ ಸಿಟ್ಟಿನಲ್ಲಿ ಮಗುವನ್ನು ನಾಲೆಗೆ ಎಸೆದಿರಬೇಕು ಎಂದು ಹೇಳಲಾಗುತ್ತಿದೆ.