ಗದಗ: ನರಗುಂದ ತಾಲ್ಲೂಕಿನ ರಡ್ಡೇರನಾಗನೂರಿನ ಯೋಧ ರಾಮನಗೌಡ ಚಂದ್ರಗೌಡ ಕರಬಸನಗೌಡ್ರ (44) ಸಿಕ್ಕಿಂ ರಾಜ್ಯದಲ್ಲಿ ಭಾನುವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಆಸ್ಸಾಂ ಮತ್ತು ಸಿಕ್ಕಿಂ ನಡುವಿನ ಬಾಂಗ್ ಡೊಂಗ್ ಎಂಬಲ್ಲಿ ಹಿಮಪಾತದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುವಾಗ ರಕ್ತದೊತ್ತಡದಿಂದ ತೀವ್ರ ಏರುಪೇರಾಗಿ ಹೃದಯಾಘಾತವಾಗಿದೆ. ತಕ್ಷಣವೇ ಸಹದ್ಯೋಗಿಗಳು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಿಗ್ಗೆ ನಿಧನ ಹೊಂದಿದ್ದಾರೆ.
ಫೆ.7ರಂದು ಯೋಧನ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಆಗಮಿಸಲಿದ್ದು, ಅಂದೇ ಅಂತ್ಯಕ್ರಿಯೆ ನೆರವೇರಲಿದೆ ಎಂದು ತಹಸೀಲ್ದಾರ್ ಶ್ರೀಶೈಲ್ ತಳವಾರ ಮಾಹಿತಿ ನೀಡಿದ್ದಾರೆ.
2002ರಲ್ಲಿ ಚಂಡೀಗಢದ ಐಟಿಬಿಪಿ (ಇಂಡಿಯನ್ ಟಿಬೆಟಿಯನ್ ಬಾರ್ಡರ್ ಸೆಕ್ಯೂರಿಟಿ ಪೋರ್ಸ್)ಗೆ ನೇಮಕವಾಗಿದ್ದರು. ಉತ್ತರಾಖಂಡದ ಜೋಶಿಮಠ, ಆಸ್ಸಾಂ, ಸಿಕ್ಕಿಂ, ಮಿಜೋರಾಂ, ಚಂಡೀಗಢ ಸೇರಿ ದೇಶದ ವಿವಿಧೆಡೆ 22 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. ಯೋಧನ ಸಾವಿನಿಂದ ರಡ್ಡೇರನಾಗನೂರಿನಲ್ಲಿ ನೀರವ ಮೌನ ಆವರಿಸಿದೆ.
ಕುಟುಂಬಸ್ಥರ ರೋದನ ಹೇಳತೀರದಾಗಿದೆ. ಅಂತಿಮ ದರ್ಶನಕ್ಕೆ ಗ್ರಾಮದಲ್ಲಿ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ.