ಗದಗ: ಸತತ 38ವರ್ಷಗಳ ಕಾಲ ಭಾರತೀಯ ಗಡಿ ಭದ್ರತಾ ಪಡೆ ಯಲ್ಲಿ (BSF) ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ನಗರಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಯೋಧನಿಗೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವತಿಯಿಂದ ಬೈಕ್ ಜಾಥಾ ಮೂಲಕ ಅದ್ದೂರಿಯಾಗಿ ಸ್ವಾಗತಿಸಲಾಯಿತು. ತಾಲೂಕಿನ ನರಸಾಪೂರ ಗ್ರಾಮದ ಬಿಎಸ್ಎಫ್ ಯೋಧ ಅಣ್ಣಪ್ಪ ಜಾಲಿಹಾಳ ಹಾಗೂ ಅವರ ಧರ್ಮಪತ್ನಿಗೆ ಹೂಮಳೆ ಸುರಿಸಿ, ಶಾಲು ಹೊದಿಸಿ ಸನ್ಮಾನಿಸಿ ಆತ್ಮೀಯವಾಗಿ ಭವ್ಯವಾಗಿ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು.
ನಗರದ ರೈಲ್ವೆ ನಿಲ್ದಾಣದಿಂದ ಜೆಂಡಾ ಸರ್ಕಲ್, ಗಾಂಧಿ ಸರ್ಕಲ್ ಮಾರ್ಗವಾಗಿ ಐತಿಹಾಸಿಕ ವೀರೇಶ್ವರ ಪುಣ್ಯಾಶ್ರಮದ ವರೆಗೆ ತೆರೆದ ವಾಹನದಲ್ಲಿ ಅದ್ದೂರಿ ಮೇರವಣಿಗೆ ನಡೆಸಲಾಯಿತು. ನಂತರ ವೀರೇಶ್ವರ ಪುಣ್ಯಾಶ್ರಮದ ಪಿಠಾಧಿಪತಿ ಪ. ಪೂ. ಡಾ: ಕಲ್ಲಯ್ಯಜ್ಜನವರಿಗೆ ಯೋಧನ ಕುಟುಂಬಸ್ಥರಿಂದ ತುಲಾಭಾರ ಕಾರ್ಯಕ್ರಮ ನಡೆಯಿತು. ಈ ವೇಳೆ ಆಶೀರ್ವಚನ ನೀಡಿದ ಶ್ರೀಗಳು ಇದು 2227 ತುಲಾಭಾರ ಕಾರ್ಯಕ್ರಮವಾಗಿದ್ದು, ಯೋಧರು ಗಾಳಿ, ಬಿಸಿಲು, ಮಳೆ ಲೆಕ್ಕಿಸದೇ ದೇಶಕ್ಕಾಗಿ ಶ್ರಮ ವಹಿಸುತ್ತಾರೆ. ಗಡಿಯಲ್ಲಿ ನಮ್ಮನ್ನು ಕಾಯ್ದು ನಿವೃತ್ತಿ ಹೊಂದಿ ಸಾಮಾಜಿಕ ಜೀವನದಲ್ಲಿ ಭಾಗವಹಿಸುತ್ತಾರೆ. ಸಾರ್ವಜನಿಕರು ಹಾಗೂ ದೇಶಭಕ್ತರು ಅವರ ಜೊತೆ ಉತ್ತಮ ಬಾಂದವ್ಯ ಹೊಂದಬೇಕು ಎಂದು ಹೇಳಿದರು.
ಈ ವೇಳೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಗದಗ ಜಿಲ್ಲಾಧ್ಯಕ್ಷರಾದ ಬಸಲಿಂಗಪ್ಪ ಮುಂಡರಗಿ, ಹಾಗೂ ಅರೆ ಸೇನಾ ಪಡೆಯ ಜಿಲ್ಲಾ ಗೌರವಾಧ್ಯಕ್ಷ ಭೋಜರಾಜ, ಹಾಗೂ ವೀರ ನಾರಿಯರ ಅಧ್ಯಕ್ಷೆ ಇಂದಿರಾ ಹೆಬಸೂರ ಮತ್ತು ಎಲ್ಲಾ ಪದಾದಿಕಾರಿಗಳು, ಮತ್ತು ಸರ್ವ ಸದಸ್ಯರು ಹಾಗೂ ಅರೆಸೇನಾಪಡೆಗಳ ಯೋಧರು ಸೇರಿದಂತೆ ಯೋಧನ ಕುಟುಂಭಸ್ಥರು ಉಪಸ್ಥಿತರಿದ್ದರು.