ನಗರದ 1.9 ಕಿ.ಮೀ ರಿಂಗ್ ರೋಡ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವ ಎಚ್.ಕೆ. ಪಾಟೀಲ ಚಾಲನೆ

ಸಮಗ್ರ ಪ್ರಭ ಸುದ್ದಿ
2 Min Read

ಗದಗ : 2024-25 ನೇ ಸಾಲಿನಲ್ಲಿ ಜಿಲ್ಲಾ ಕೇಂದ್ರವಾದ ಗದಗನಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ರಿಂಗ್ ರೋಡ ಕಾಮಗಾರಿಯನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್. ಕೆ. ಪಾಟೀಲ ಅವರು ಹೇಳಿದರು.

ನಗರದ ಹಾಲತಗೇರಿ ರಸ್ತೆಯ ಆರ್ಕೇಡ್ ಕಾಂಪ್ಲೆಕ್ಸ್ ಹತ್ತಿರ ರವಿವಾರ ಲೋಕೋಪಯೋಗಿ ಇಲಾಖೆಯಿಂದ ಅಬ್ದುಲ್ ಕಲಾಂ ಶಾದಿಮಹಲ್ ರಸ್ತೆಯಿಂದ ಸಂಬಾಪುರ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಸಚಿವ ಎಚ್. ಕೆ. ಪಾಟೀಲ ಮಾತನಾಡಿದರು.

ಇಂದು 4 ಕೋಟಿ ಅನುದಾನದಲ್ಲಿ 1.9 ಕಿ.ಮೀ ರಿಂಗ್ ರೋಡ ಅಭಿವೃದ್ಧಿಪಡಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ರಿಂಗ್ ರೋಡ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದರು.

ದೋಭಿ ಘಾಟ್‍ದಿಂದ ಮುಂಡರಗಿ ರಸ್ತೆ ಅಲ್ಲಿಂದ ಬೆಟಗೇರಿ ನಂತರ ಹೊಂಬಳ ರಸ್ತೆ ಸಂಪರ್ಕ ಕಲ್ಪಿಸಿದರೆ ರಿಂಗ್‍ರೋಡ ಕಾಮಗಾರಿ ಪೂರ್ಣಗೊಳ್ಳಲಿದೆ. ಇದಕ್ಕಾಗಿ 241 ಕೋಟಿ ರೂ. ಅನುದಾನ ಅಗತ್ಯವಾಗಿದೆ ಎಂದರು. ಲೋಕೋಪಯೋಗಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಅವರು ರಿಂಗ್‍ರೋಡ ಕಾಮಗಾರಿ ಕೈಗೊಳ್ಳಲು ಅಗತ್ಯವಿರುವ ಅನುದಾನವನ್ನು ನೀಡುವ ಭರವಸೆ ನೀಡಿದ್ದು ರಿಂಗ್ ರೋಡ ಕಾಮಗಾರಿ ಪೂರ್ಣಗೊಳಿಸಲು ಕ್ರಮವಹಿಸಲಾಗುತ್ತಿದೆ ಎಂದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶಾಸಕರಿಗೆ 25 ಕೋಟಿ ರೂ. ಅನುದಾನ ನೀಡುವ ಭರವಸೆ ನೀಡಿದ್ದು ಅದನ್ನು ಅತ್ಯಂತ ಅಗತ್ಯ ಹಾಗೂ ಅನಿವಾರ್ಯ ಕಾಮಗಾರಿಗಳಿಗೆ ಬಳಸಲು ತಿಳಿಸಿದ್ದಾರೆ. ಈ ಅನುದಾನದಲ್ಲಿಯೂ ಸಹ ನಗರದ ಕಾಮಗಾರಿಗಳನ್ನು ಕೈಗೊಳ್ಳಲು ಬಳಸಲಾಗುವುದು ಎಂದು ತಿಳಿಸಿದರು.

ಕಳೆದ ಸಾಲಿನ ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳಲ್ಲಿ ಪೂರ್ಣವಾಗದ ಹಾಗೂ ಆರಂಭವಾಗದ ಅಂದಾಜು 15 ಕಾಮಗಾರಿಗಳು ಬಾಕಿ ಇದ್ದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಈ ಕುರಿತು ಗಮನಹರಿಸಬೇಕು. ಅಲ್ಲದೇ ಮುಂದಿನ ಒಂದು ತಿಂಗಳೊಳಗಾಗಿ ಈ ಎಲ್ಲ ಕಾಮಗಾರಿಗಳನ್ನು ಆರಂಭಿಸಿ ಪೂರ್ಣಗೊಳಿಸಬೇಕು ಎಂದು ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸಚಿವ ಎಚ್.ಕೆ.ಪಾಟೀಲ ಅವರು ನಿರ್ದೇಶನ ನೀಡಿದರು.

ಗದಗ ಬೆಟಗೇರಿ ನಗರಸಭೆ ಸದಸ್ಯರಾದ ಎಲ್.ಡಿ. ಚಂದಾವರಿ ಮಾತನಾಡಿ ಇಂದು ಆರಂಭವಾದ ಕಾಮಗಾರಿ ಪೂರ್ಣಗೊಂಡರೆ ರಿಂಗ್ ರೋಡ ಕಾಮಗಾರಿ ಶೇ. 75 ರಷ್ಟು ಪ್ರಗತಿ ಸಾಧಿಸಿದಂತಾಗುತ್ತದೆ. ಇದರಿಂದ ನಗರದ ಸಂಚಾರಿ ದಟ್ಟಣೆ ನಿಯಂತ್ರಣ ಖಂಡಿತವಾಗಿಯೂ ಕಡಿಮೆಯಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಗಣ್ಯರಾದ ಬಿ.ಎಸ್. ತಳವಾರ, ಕರಿಸೋಮನಗೌಡ್ರ, ರೋಣದ ಅಜ್ಜಣ್ಣ ಪಾಟೀಲ, ಶರಣು, ಯರನಾಳ, ಅಶೋಕ ಮಂದಾಲಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Share this Article