ರೋಣ :- ಕೂಸಿನ ಮನೆಯ ಆರೈಕೆದಾರರು ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ತಾಯಿಯನ್ನು ಸಹ ಮಕ್ಕಳು ಮರೆಯುವ ಹಾಗೆ ವ್ಯಕ್ತಿತ್ವ ರೂಪಿಸಿಕೊಳ್ಳಿ, ಮಕ್ಕಳಲ್ಲಿ ಯಾವುದೇ ಭೇದಭಾವ ಮೂಡಿಸದೇ ತಮಗೆ ವಹಿಸಿದ ಜವಾಭ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ರೋಣ ತಾಲೂಕಿನ ಕೂಸಿನ ಮನೆಗಳನ್ನು ರಾಜ್ಯದಲ್ಲೇ ಮಾದರಿಗೊಳಿಸಬೇಕೆಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ರವಿ ಎ.ಎನ್ ಹೇಳಿದರು.
ರೋಣ ತಾಲೂಕಿನ ಕುರಹಟ್ಟಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕೂಸಿನ ಮನೆಯಲ್ಲಿ ನಡೆದ ಕೂಸಿನ ಮನೆ ಆರೈಕೆದಾರರ ಮೂರು ದಿನಗಳ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು
ಮೂರು ದಿನಗಳಿಂದ ತರಬೇತಿ ಪಡೆದಿರುವ ಕೂಸಿನ ಮನೆಯ ಆರೈಕೆದಾರರು ತಮ್ಮ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕಾರ್ಯಕ್ರಮ ವನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸುವಲ್ಲಿ ಶ್ರಮಿಸಬೇಕು. ಕೂಸಿನ ಮನೆಯಲ್ಲಿ ಮಕ್ಕಳಿಗೆ ನೀಡುವ ಬಗ್ಗೆ ಸುರಕ್ಷತೆ ವಹಿಸಿ ಮಕ್ಕಳ ಸುರಕ್ಷತೆ ಜೊತೆಗೆ ಮಕ್ಕಳ ಪಾಲಕರಲ್ಲೂ ಕೂಸಿನ ಮನೆಯ ಕಾರ್ಯಕ್ಷಮತೆಯ ಬಗ್ಗೆ ವಿಶ್ವಾಸ ಮೂಡಿಸುವ ಕೆಲಸವನ್ನು ಆರೈಕೆದಾರರು ಮಾಡಬೇಕು ಎಂದರು…
ಸಮಾರಂಭದ ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕಿನ ಸಹಾಯಕ ನಿರ್ದೇಶಕ ( ಗ್ರಾ.ಊ) ರಿಯಾಜ್ ಖತೀಬ್ ಕೂಸಿನ ಮನೆಯ ಆರೈಕೆದಾರರು ಕೇವಲ ವೇತನಕ್ಕಾಗಿ ದುಡಿಯದೇ ಮಕ್ಕಳ ಸೇವೆಯನ್ನು ಮಾಡುತ್ತಿದ್ದೆವೆಂದು ತಿಳಿದು ಕೆಲಸ ಮಾಡಬೇಕು ಎಂದರು. ಅಲ್ಲದೆ ನರೇಗಾ ಕೂಲಿಕಾರರ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳಸುವ ಕಾರ್ಯವನ್ನು ಆರೈಕೆದಾರರು ಮಾಡಬೇಕೆಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಐಇಸಿ ಸಂಯೋಜಕ ವ್ಹಿ.ಎಸ್.ಸಜ್ಜನ, ಯಾವುದೇ ಕೀಳೆರೆಮೆಗೆ ಒಳಗಾಗದೇ ಆತ್ಮವಿಶ್ವಾಸದಿಂದ ಕೂಸಿನ ಮನೆಯನ್ನು ಆರೈಕೆದಾರರು ನಿರ್ವಹಿಸಬೇಕು. ಗ್ರಾಮಸ್ಥರ ಮತ್ತು ನರೇಗಾ ಕೂಲಿಕಾರರಲ್ಲಿ ಕೂಸಿನ ಮನೆಯ ಬಗ್ಗೆ ಹೆಚ್ಚು ವಿಶ್ವಾಸ ಮೂಡಿಸಿದ್ದೇಯಾದಲ್ಲಿ ಕೂಸಿನ ಮನೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದರು.
ಕೂಸಿನ ಮನೆಯ ಆರೈಕೆದಾರರಿಗೆ ನಡೆದ ಮೂರು ದಿನಗಳ ತರಬೇತಿ ಕಾರ್ಯಾಗಾರದ ಕೊನೆಯ ದಿನ ಕುರಹಟ್ಟಿ ಗ್ರಾಮ ಪಂಚಾಯತಿಯ ಕೂಸಿನ ಮನೆಯಲ್ಲಿ ತರಬೇತಿಯಲ್ಲಿ ಭಾಗವಹಿಸಿದ ತಾಲೂಕಿನ ಆರೈಕೆದಾರರಿಗೆ ಕೂಸಿನ ಮನೆಯ ಪ್ರಾತ್ಯಕ್ಷತೆಯನ್ನು ನೀಡಲಾಯಿತು. ಜಿಲ್ಲಾ ಐಇಸಿ ಸಂಯೋಜಕ ಕೂಸಿನ ಮನೆಯಲ್ಲಿ ಕೈಗೊಳ್ಳಬೇಕಾದ ಚಟುವಟಿಕೆಗಳನ್ನು ಹಾಗೂ ನಿರ್ವಹಿಸಬೇಕಾದ ದಾಖಲೆಗಳ ಕುರಿತು ಪ್ರಾತ್ಯಕ್ಷತೆ ಮೂಲಕ ಮಾಹಿತಿ ನೀಡಿದರು.
ಸಮಾರೋಪ ಕಾರ್ಯಕ್ರಮ ವನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸಿದ್ದನಗೌಡ ಪಾಟೀಲ್ ರಿಬ್ಬನ್ ಕಟ್ ಮಾಡುವ ಮೂಲಕ ಚಾಲನೆ ನೀಡಿದರು. ಕುರಹಟ್ಟಿ ಗ್ರಾಮ ಪಂಚಾಯತ ಉಪಾಧ್ಯಕ್ಷರು ಸದಸ್ಯರು, ತಾಲೂಕಿನ ಕೂಸಿನ ಮನೆಗಳ ಆರೈಕೆದಾರರು, ಗ್ರಾಪಂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು. ಮಂಜುನಾಥ ನಿರೂಪಿಸಿ ವಂದಿಸಿದರು.