ಲಕ್ಷ್ಮೇಶ್ವರ: ಗ್ರಾಮೀಣ ಮಹಿಳೆಯರ ಮಕ್ಕಳ ಪಾಲನೆ ಮತ್ತು ಪೋಷಣೆಗಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ’ಕೂಸಿನ ಮನೆ’ ಶಿಶುಪಾಲನಾ ಕೇಂದ್ರ ಆರಂಭಕ್ಕೆ ಸರಕಾರ ಮುಂದಡಿ ಇಟ್ಟಿದ್ದು, ಮೊದಲ ಹಂತದಲ್ಲಿ ಲಕ್ಷ್ಮೇಶ್ವರ ತಾಲೂಕಿನ 13 ಕೇಂದ್ರಗಳನ್ನು ತೆರೆಯಲು ತಯಾರಿ ನಡೆಸಿದೆ.
ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯಿಂದ ಕೂಸಿನ ಮನೆ ಶಿಶುಪಾಲನಾ ಕೇಂದ್ರಗಳನ್ನು ಆರಂಭಿಸುವ ಕಾರ್ಯ ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚಿನ ಮಹಿಳೆಯರು ಕೆಲಸ ಮಾಡಲು ಸೈಟ್ಗಳಿಗೆ ತೆರಳಿದರೆ 3 ವರ್ಷದೊಳಗಿನ ಮಕ್ಕಳನ್ನು ನೋಡಿಕೊಳ್ಳಲು ಯಾರು ಇರುವುದಿಲ್ಲ. ಇದರಿಂದ ಮಹಿಳೆಯರು ಕೆಲಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದರು. ಇನ್ನೂ ಕೆಲವರು ಮಕ್ಕಳನ್ನು ಕರೆದುಕೊಂಡು ಕಾಮಗಾರಿ ಸ್ಥಳಕ್ಕೆ ಹೋಗುತ್ತಿದ್ದರು. ಇಂತದನ್ನು ತಡೆಯುವುದು ಹಾಗೂ ಮಹಿಳೆಯರ ಉದ್ಯೋಗಕ್ಕೆ ಒತ್ತು ನೀಡಲು ಈ ಶಿಶುಪಾಲನಾ ಕೇಂದ್ರ (ಕೂಸಿನ ಮನೆ)ಗಳನ್ನು ತೆರೆಯಲು ಇಲಾಖೆ ಮುಂದಾಗಿದೆ.
ಕೇರ್ಟೇಕರ್ಸ್ಗೆ ಟ್ರೇನಿಂಗ್:
ಶಿಶುಪಾಲನಾ ಕೇಂದ್ರಗಳು ಆರಂಭವಾದರೆ ಮಕ್ಕಳನ್ನು ನೋಡಿಕೊಳ್ಳಲು ನರೇಗಾ ಮಹಿಳಾ ಕೂಲಿ ಕಾರ್ಮಿಕರನ್ನೇ ‘ಕೇರ್ ಟೇಕರ್ಸ್’ ಎಂದು ಗುರುತಿಸಿ ಅವರಿಗೆ ಟ್ರೇನಿಂಗ್ ನೀಡಲಾಗಿದೆ. ಉದ್ಯೋಗ ಖಾತ್ರಿಯಡಿ ಎಷ್ಟಿದೆಯೋ ಅಷ್ಟನ್ನು ಕೇರ್ಟೇಕರ್ಸ್ಗೆ ದಿನಕ್ಕೆ ವೇತನ ಪಾವತಿಸಲಾಗುತ್ತದೆ.
ಶಿಶುಪಾಲನಾ ಕೇಂದ್ರದಲ್ಲಿ ಏನೇನಿರಲಿದೆ?:
ಶಿಶುಪಾಲನಾ ಕೇಂದ್ರಗಳು ಮೊದಲು ಸುಸಜ್ಜಿತ ಕಟ್ಟಡ, ನೀರು, ಗಾಳಿ, ಬೆಳಕು, ಶೌಚಾಲಯ ವ್ಯವಸ್ಥೆ ಇರಬೇಕು. ಜತೆಗೆ ಮಕ್ಕಳಿಗೆ ಆಟದ ಸಾಮಗ್ರಿಗಳು, ಕಲಿಕಾ ಸಾಮಗ್ರಿಗಳನ್ನು ಕೇಂದ್ರದಲ್ಲಿ ಒಳಗೊಂಡಿರಲಿದೆ. ಮಕ್ಕಳಿಗೆ ಉತ್ತಮ ವಾತಾವರಣವನ್ನು ಒದಗಿಸುವ ಒದಗಿಸಲು ಕೇಂದ್ರದ ಗೋಡೆಗಳನ್ನು ಪ್ರಾಣಿ, ಪಕ್ಷಿಗಳ ಚಿತ್ರಗಳಿಂದ ಆಕರ್ಷಣೆ ಹೆಚ್ಚಿಸಲಾಗಿದೆ. ಕನ್ನಡ, ಇಂಗ್ಲೀಷ್ ವರ್ಣಮಾಲೆಗಳು, ಅಂಕಿ ಸಂಖ್ಯೆಗಳನ್ನು ಬರೆಯಿಸಲಾಗಿದೆ. ಪ್ರತಿ ಮಗುವಿಗೂ ಮಧ್ಯಾಹ್ನ ಪೌಷ್ಟಿಕಾಂಶಯುಕ್ತ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗುತ್ತದೆ. ಈಗಾಗಲೇ ಪಂಚಾಯತಿ ವ್ಯಾಪ್ತಿಯಲ್ಲಿಯ ಗ್ರಾಮಗಳಲ್ಲಿನ 150 ಕ್ಕೂ ಹೆಚ್ಚು ಮಕ್ಕಳನ್ನು ಗುರುತಿಸಲಾಗಿದೆ.
“ಗ್ರಾಪಂ ಮಟ್ಟದಲ್ಲಿ ಕೂಲಿಕಾರರ ಮಕ್ಕಳ ಪಾಲನೆಗಾಗಿ ಕೂಸಿನ ಮನೆ ಹೆಸರಿನಲ್ಲಿ ಶಿಶುಪಾಲನಾ ಕೇಂದ್ರಗಳನ್ನು ಆರಂಭಿಸುತ್ತಿದ್ದೇವೆ. ಈಗಾಗಲೇ ತಾಲೂಕಿನ 13 ಗ್ರಾಪಂಗಳಲ್ಲಿ ಕೇಂದ್ರ ಆರಂಭವಾಗಿವೆ. ಪ್ರತಿ ಪಂಚಾಯಿತಿಗೆ 8 ಜನ ಆರೈಕೆದಾರರ (ಕೇರ್ಟೇಕರ್ಸ್ಗೆ) ತರಬೇತಿ ನೀಡಲಾಗಿದೆ.”
– ಕೃಷ್ಣಪ್ಪ ಧರ್ಮರ
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೇಶ್ವರ.