ಬೆಂಗಳೂರು, ಜ. 17:“ಯತೀಂದ್ರ ಅವರು ಜವಾಬ್ದಾರಿಯುತ ನಾಯಕ. ತಮಗೆ ಶಕ್ತಿ ನೀಡುವಂತೆ ಜನರನ್ನು ಕೇಳುವುದು ಸ್ವಾಭಾವಿಕ. ಅವರ ಹೇಳಿಕೆ ತಿರುಚುವ ಅಗತ್ಯವಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಕುಮಾರಕೃಪ ಅತಿಥಿ ಗೃಹದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಉತ್ತರಿಸಿದರು.
ಲೋಕಸಭೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆದ್ದರೆ ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂಬ ಯತೀಂದ್ರ ಹೇಳಿಕೆ ಬಗ್ಗೆ ಮಾಧ್ಯಮಡವರು ಕೇಳಿದಾಗ ಅವರು ಪ್ರತಿಕ್ರಿಯಿಸಿದ್ದು ಹೀಗೆ:
“ನಮ್ಮ ಸರ್ಕಾರ ಐದು ವರ್ಷ ಬಲಿಷ್ಠವಾಗಿರುತ್ತದೆ. ಸಿದ್ದರಾಮಯ್ಯ ಅವರು ಈಗ ನಮ್ಮ ಮುಖ್ಯಮಂತ್ರಿಗಳು. ಅವರು ಮುಖ್ಯಮಂತ್ರಿಯಾಗಿ, ನಾನು ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷನಾಗಿ ಇಬ್ಬರೂ ಒಟ್ಟಿಗೆ ಚುನಾವಣೆ ನಡೆಸುತ್ತೇವೆ. ಅವರ ನಾಯಕತ್ವದಲ್ಲಿ ಚುನಾವಣೆ ನಡೆಯಲಿದೆ. ಅದರಲ್ಲಿ ಅನುಮಾನವಿಲ್ಲ. ಆಸೆ ಪಡುವುದು, ಜನರಿಗೆ ಶಕ್ತಿ ನೀಡುವಂತೆ ಕೇಳುವುದು ತಪ್ಪಲ್ಲ. ನಮ್ಮ ಭಾಗದಲ್ಲಿ ನಾನು ಕೂಡ ಶಕ್ತಿ ನೀಡುವಂತೆ ಜನರ ಬಳಿ ಕೇಳುತ್ತೇನೆ. ಅದನ್ನು ತಿರುಚುವ ಅಗತ್ಯವಿಲ್ಲ. ಯತೀಂದ್ರ ಬಹಳ ಜವಾಬ್ದಾರಿಯುತ ನಾಯಕ. ನಾವು ಅವರಿಗೆ ಪ್ರೋತ್ಸಾಹ ನೀಡುತ್ತೇವೆ.”
ಶಿವಕುಮಾರ್ ಅವರಿಗೆ ಅಧಿಕಾರ ಸಿಗಬಾರದು ಎಂಬ ಅಧಿಕಾರ ಹಂಚಿಕೆ ಸೂತ್ರ ಕಾಂಗ್ರೆಸ್ ನಲ್ಲಿ ಆಗಿದೆ ಎಂಬ ಬಿಜೆಪಿ ಟೀಕೆ ಬಗ್ಗೆ ಕೇಳಿದಾಗ, “ಬಿಜೆಪಿಯವರು ಅವರ ಪಕ್ಷದ ವಿಚಾರ ಸರಿ ಮಾಡಿಕೊಳ್ಳಲಿ” ಎಂದು ತಿರುಗೇಟು ನೀಡಿದರು.
ಮೈಸೂರು ಸ್ಯಾಂಡಲ್ ನಕಲಿ ಸೋಪು ತಯಾರಕರ ಜತೆ ಬಿಜೆಪಿ ನಾಯಕರ ಒಡನಾಟದ ವಿಚಾರವಾಗಿ ಕೇಳಿದಾಗ, “ನಕಲಿ ಮೈಸೂರು ಸ್ಯಾಂಡಲ್ ಸೋಪ್ ಗಳನ್ನು ನಾನೂ ನೋಡಿದ್ದೇನೆ. ನೈಜ ಹಾಗೂ ನಕಲಿ ಎರಡೂ ಮಾದರಿಯ ಸಾಬೂನು ನೋಡಿದ್ದೇವೆ. ನಕಲಿ ಸೋಪುಗಳು ಒಂದು ದಿನದ ನಂತರ ಬಣ್ಣ ಕಳೆದುಕೊಳ್ಳುತ್ತವೆ. ಈ ಬಗ್ಗೆ ತನಿಖೆಯಾಗಬೇಕು ಎಂದು ನಾನು ಈಗಾಗಲೇ ಹೇಳಿದ್ದೆ. ಈ ಹಿಂದೆ ಮೈಸೂರು ಲ್ಯಾಂಪ್ಸ್ ಗಳನ್ನು ನಕಲು ಮಾಡಲಾಗುತ್ತಿತ್ತು. ಈಗ ಮೈಸೂರ್ ಸ್ಯಾಂಡಲ್ ನಕಲಿ ಸೋಪು ಬಗ್ಗೆ ತನಿಖೆ ಮಾಡಿ ಒಳ್ಳೆಯ ಕೆಲಸ ಮಾಡಿದ್ದಾರೆ. ಇದರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ಹುಬ್ಬಳ್ಳಿಯಲ್ಲಿ 300 ಕೋಟಿ ಮೌಲ್ಯದ ರೈಲ್ವೇ ಭೂಮಿಯನ್ನು ಕೇವಲ 80 ಕೋಟಿಗೆ ಬಿಡ್ ಕರೆಯಲು ಮುಂದಾಗಿದ್ದು, ಇದರ ಹಿಂದೆ ಬಿಜೆಪಿ ನಾಯಕರ ಕೈವಾಡದ ಬಗ್ಗೆ ಕೇಳಿದಾಗ, “ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಹಿತಿ ಇಲ್ಲದೆ ನಾನು ಮಾತನಾಡುವುದಿಲ್ಲ. ಅನಗತ್ಯವಾಗಿ ಮಾತನಾಡುವುದಿಲ್ಲ” ಎಂದು ತಿಳಿಸಿದರು.
ನಿಗಮ ಮಂಡಳಿ ಪಟ್ಟಿ ವಿಚಾರವಾಗಿ ಕೇಳಿದಾಗ, “ನಿಗಮ ಮಂಡಳಿ ನೇಮಕ ಪಟ್ಟಿ ಶೀಘ್ರವೇ ಬಿಡುಗಡೆ ಮಾಡಲಾಗುವುದು. ಮುಖ್ಯಮಂತ್ರಿಗಳು ಹೇಳಿದಾಗ ನಿಮ್ಮ ಗಮನಕ್ಕೆ ತರುತ್ತೇನೆ” ಎಂದರು.