ಕೇರಳದಲ್ಲಿ ಕೋವಿಡ್ ಹೆಚ್ಚಳ, ಕರ್ನಾಟಕ್ಕೆ ಆತಂಕವಿಲ್ಲ : ದಿನೇಶ ಗೂಂಡುರಾವ್

ಸಮಗ್ರ ಪ್ರಭ ಸುದ್ದಿ
1 Min Read

ಬೆಂಗಳೂರು: ನೆರೆಯ ಕೇರಳ ರಾಜ್ಯದಲ್ಲಿ ಕೋವಿಡ್ ಪ್ರಮಾಣ ಹೆಚ್ಚಾಗಿರುವ ಮಾಹಿತಿ ಇದ್ದರೂ ರಾಜ್ಯದಲ್ಲಿ ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ನಗರದ ಮಾಗಡಿ ರಸ್ತೆಯ ಆರೋಗ್ಯ ಸೌಧದ ಬಳಿ ಸಿಎಸ್ಆರ್ ಯೋಜನೆಯಡಿ ಸಮುದಾಯ ಆರೋಗ್ಯ ಸೇವೆ ಒದಗಿಸುವ ವೆಲ್ನೆಸ್ ಆನ್ ವೀಲ್ಸ್ ವಾಹನಕ್ಕೆ ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳದಲ್ಲಿ ಕೋವಿಡ್ ಸೋಂಕು ಯಾವ ರೀತಿ ಜನರ ಮೇಲೆ ಪ್ರಭಾವ ಬೀರಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ.

ರಾಜ್ಯದಲ್ಲಿ ಆತಂಕಪಡುವಂತಹ ಬೆಳವಣಿಗೆ ಏನೂ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.ಚಳಿಯ ವಾತಾವರಣದಿಂದಾಗಿ ವೈರಲ್ ಇನ್ಫ್ಲುಯೆಂಜ ಹಾಗೂ ಕೋವಿಡ್ ಸೋಂಕು ಕಂಡುಬರುತ್ತಿದೆ. ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೇರಳದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಶಿಷ್ಟಾಚಾರ ಪಾಲನೆ ಮಾಡಬೇಕಿದೆ. ಮುನ್ನೆಚ್ಚರಿಕೆ ದೃಷ್ಟಿಯಿಂದ ಎಲ್ಲವನ್ನು ಗಮನಿಸಲಾಗುತ್ತಿದೆ.

ಒಂದು ವೇಳೆ ಆತಂಕಪಡುವ ಸ್ಥಿತಿ ಬಂದಾಗ ಅದಕ್ಕೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸದ್ಯಕ್ಕೆ ರಾಜ್ಯದಲ್ಲಿ ಭಯ ಸೃಷ್ಟಿಸುವ ವಾತಾವರಣವಿಲ್ಲ. ಸೋಂಕು ಪೀಡಿತ ಪ್ರದೇಶದಿಂದ ಬರುವವರನ್ನು ಪರೀಕ್ಷೆಗೊಳಪಡಿಸಲಾಗುತ್ತದೆ ಎಂದು ಹೇಳಿದರು. ಆರೋಗ್ಯ ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ಸಭೆ ನಡೆಸಿ ರಾಜ್ಯದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಕೇರಳದಲ್ಲಿ ಯಾವ ರೀತಿಯ ಸೋಂಕು ಹೆಚ್ಚಾಗಿದೆ ಎಂಬ ಬಗ್ಗೆ ತಜ್ಞರಿಂದ ಮಾಹಿತಿ ಪಡೆಯಲಾಗುವುದು ಎಂದರು.

Share this Article