ಹಾವೇರಿ : ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದ್ದು, ಮಳೆಗಾಗಿ ಮೋಡ ಬಿತ್ತನೆ ಮಾಡುವ ಚರ್ಚೆ ಹಲವೆಡೆ ಕೇಳಿ ಬಂದಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೋಡ ಬಿತ್ತನೆಯ ಪ್ರಯೋಗವನ್ನು ತಳ್ಳಿ ಹಾಕಿದ್ದರು. ಇದರ ನಡುವೆಯೇ ರಾಣೇಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ತಮ್ಮ ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆಗೆ ಕೈ ಹಾಕಿದ್ದಾರೆ. ಇಂದಿನಿಂದ ಸೋಮವಾರದಿಂದ ಮೂರು ದಿನಗಳ ಕಾಲ ಮೋಡ ಬಿತ್ತನೆಯನ್ನು ನಡೆಸಲಿದ್ದಾರೆ.
ಪಿಕೆಕೆ ಲಿಮಿಟೆಡ್ ಎಂಬ ಸಂಸ್ಥೆಯಿಂದ ಮೋಡ ಬಿತ್ತನೆಗೆ ಪ್ರಕಾಶ್ ಕೋಳಿವಾಡ ಸಿದ್ಧತೆ ನಡೆಸಿದ್ದಾರೆ. ಪಿಕೆಕೆ ಲಿಮಿಟೆಡ್‌ಗೆ ಈ ಹಿಂದೆ ಮೋಡ ಬಿತ್ತನೆ ಕ್ಷೇತ್ರದಲ್ಲಿ ಅನುಭವವಿದ್ದು, ಇದರ ಪ್ರಚಾರಕರು ಆಗಿರುವ ಪ್ರಕಾಶ್ ಕೋಳಿವಾಡ ಈಗ ತಮ್ಮದೇ ಕ್ಷೇತ್ರದಲ್ಲಿ ಮೋಡ ಬಿತ್ತನೆ ಪ್ರಯೋಗಕ್ಕೆ ಸಿದ್ಧವಾಗಿದ್ದಾರೆ. ಈ ಹಿಂದೆಯೂ ಮೋಡ ಬಿತ್ತನೆಗೆ ಅವಕಾಶ ನೀಡಿ ಎಂದು ಸದನದಲ್ಲಿಯೇ ಪ್ರಕಾಶ್ ಕೋಳಿವಾಡ ಸರ್ಕಾರಕ್ಕೆ ಆಗ್ರಹಿಸಿದ್ದರು. ಈಗ ಸರ್ಕಾರದಿಂದ ಅನುಮತಿ ಪಡೆದು ಮೋಡ ಬಿತ್ತನೆಗೆ ಮುಂದಾಗಿದ್ದಾರೆ.
ಕಳೆದ ವಾರ ಸರ್ಕಾರ ಸುಮಾರು 130 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಸೃಷ್ಟಿಯಾಗಿದೆ. ಕುಡಿಯುವ ನೀರಿಗೂ ಕೂಡ ತತ್ವಾರ ಉಂಟಾಗಿದೆ ಎಂದು ಹೇಳಿತ್ತು.
ಈ ಹಿನ್ನೆಲೆ ಪ್ರಕಾಶ್ ಕೋಳಿವಾಡ ಮೋಡ ಬಿತ್ತನೆ ಪ್ರಯೋಗಕ್ಕೆ ಸಿದ್ಧವಾಗಿದ್ದು, ಸರ್ಕಾರ ಕೂಡ ಕಾರ್ಯಾಚರಣೆಗೆ ಒಪ್ಪಿಗೆ ಸೂಚಿಸಿದೆ. ಮೋಡ ಬಿತ್ತನೆಗೆ ಬಳಸುವ ವಿಮಾನಗಳು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಕಾರ್ಯಾಚರಣೆ ನಡೆಸಲಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಪ್ರಕಾಶ್ ಕೋಳಿವಾಡ, ನಮ್ಮ ಸಂಸ್ಥೆ ರೈತರ ಹಿತಕ್ಕಾಗಿ ಈ ಕೆಲಸ ಮಾಡುತ್ತಿದೆ. ಭಾರತೀಯ ಹವಾಮಾನ ಇಲಾಖೆ ಕೂಡ ಈ ಬಾರಿ ಮಳೆ ಕೊರತೆ ಇದೆ ಎಂದು ವರದಿ ನೀಡಿದೆ. ಹಾಗಾಗಿ ನಾವು ಏನಾದರೂ ಮಾಡಬೇಕು ಎಂದು ಹೇಳಿದ್ದಾರೆ.
ಹಾವೇರಿ ಜಿಲ್ಲೆಗೆ ಸೀಮಿತ :
ಮೋಡ ಬಿತ್ತನೆ ಕಾರ್ಯಾಚರಣೆ ಕೇವಲ ಹಾವೇರಿ ಜಿಲ್ಲೆಗೆ ಸೀಮಿತವಾಗಿರುತ್ತದೆ. ಈ ಕಾರ್ಯಾಚರಣೆ ಯಶಸ್ವಿಯಾಗುತ್ತದೆ ಎಂಬ ನಂಬಿಕೆ ಇದೆ ಎಂದು ಪ್ರಕಾಶ್ ಕೋಳಿವಾಡ ಹೇಳಿದ್ದಾರೆ. ಇನ್ನು, ಮೋಡಗಳ ಲಭ್ಯತೆಯ ಅನುಗುಣವಾಗಿ ಅಲ್ಲಲ್ಲಿ ಮೋಡ ಬಿತ್ತನೆ ಮಾಡಲಿದೆ. ಈ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಹೆಚ್ಚಿನ ಮೋಡಗಳು ಸಿಗಲಿವೆ ಎನ್ನುವ ಮಾಹಿತಿಯಿದೆ. ಈಗಾಗಲೇ ಮೋಡ ಬಿತ್ತನೆ ಮಾಡಲು ಜಿಲ್ಲಾಧಿಕಾರಿಗಳು ಹಾಗೂ ಕೇಂದ್ರ ಸರ್ಕಾರದಿಂದ ಪರವಾನಗಿ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.