ವಿಧಾನ ಪರಿಷತ್ ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರ

ಸಮಗ್ರ ಪ್ರಭ ಸುದ್ದಿ
1 Min Read

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ನ ನೂತನ ಸದಸ್ಯರಾಗಿ ಉಮಾಶ್ರೀ, ಎಮ್ ಆರ್ ಸೀತಾರಾಮ್ ಮತ್ತು ಎಚ್. ಪಿ ಸುದಾಮ್ ದಾಸ್ ಅವರು ಪ್ರಮಾಣವಚನ ಸ್ವೀಕರಿಸಿದರು.

ಗುರುವಾರ ವಿಧಾನಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ಸರಳ ಸಮಾರಂಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರುಗಳಾದ ಎಚ್ ಕೆ ಪಾಟೀಲ್, ಬೋಸರಾಜು ಸೇರಿದಂತೆ ಹಲವು ಶಾಸಕರುಗಳು, ನೂತನ ಶಾಸಕರುಗಳ ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.

ಕಲಾವಿದರ ಕೋಟಾದಡಿ ಉಮಾಶ್ರೀ ಅವರಿಗೆ ಸ್ಥಾನ ನೀಡಿದರೆ, ಶಿಕ್ಷಣ ಕ್ಷೇತ್ರದ ಕೋಟಾದಡಿ ಎಂ.ಆರ್.ಸೀತಾರಾಮ್ ಹಾಗೂ ಸಮಾಜಸೇವೆ ಹೆಸರಲ್ಲಿ ನಿವೃತ್ತ ಇಡಿ ಅಧಿಕಾರಿ ಸುಧಾಮ್ ದಾಸ್ ಅವರಿಗೆ ಸ್ಥಾನ ನೀಡಲಾಗಿದೆ.
ಮೇಲ್ಮನೆಯ ಮೂರು ಹೊಸ ನಾಮನಿರ್ದೇಶಿತ ಸದಸ್ಯರಾದ ಮೋಹನ್ ಕುಮಾರ್ ಕೊಂಡಜ್ಜಿ, ಪಿ ಆರ್ ರಮೇಶ್ ಮತ್ತು ಸಿ ಎಂ ಲಿಂಗಪ್ಪ ಅವರ ನಿವೃತ್ತಿಯಿಂದಾಗಿ ತೆರವಾದ ಸ್ಥಾನಗಳಿಗೆ ಮೂವರನ್ನು ನಾಮ ನಿರ್ದೇಶನಗೊಳಿಸಲಾಗಿದೆ.

ಉಮಾಶ್ರೀ ಅವರು ಬಾಗಲಕೋಟೆ ಜಿಲ್ಲೆಯ ತೇರದಾಳದಿಂದ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಬಯಸಿದ್ದರು, ಆದರೆ ಟಿಕೆಟ್ ಕೈ ತಪ್ಪಿತ್ತು, ಸೀತಾರಾಮ್ ಅವರ ಪುತ್ರ ಎಂ ಎಸ್ ರಕ್ಷಾ ರಾಮಯ್ಯ ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಜಾರಿ ನಿರ್ದೇಶನಾಲಯದ ಮಾಜಿ ಅಧಿಕಾರಿ ಸುಧಾಮ್ ದಾಸ್ ಅವರು ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಸೇರಿದ್ದರು.

Share this Article