ಮೈಸೂರು : ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಪಂಚಖಾತ್ರಿ ಯೋಜನೆಗಳ ಮಾದರಿಯನ್ನು ಕಾಂಗ್ರೆಸ್ ಮುಂದಿನ ದಿನಗಳಲ್ಲಿ ದೇಶಾದ್ಯಂತ ಜಾರಿಗೊಳಿಸುವ ಭರವಸೆ ನೀಡಲಾಗು ವುದು ಎಂದು ಕಾಂಗ್ರೆಸ್ನ ವರಿಷ್ಠ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಮೈಸೂರಿನಲ್ಲಿಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕ ದೇಶಕ್ಕೆ ದಿಕ್ಸೂಚಿಯಾಗಿದೆ. ಪಂಚಖಾತ್ರಿ ಯೋಜನೆಗಳು ಅದರಲ್ಲೂ ಗೃಹಲಕ್ಷ್ಮಿ ದೇಶದಲ್ಲೇ ಅತೀ ಹೆಚ್ಚು ಹಣ ವರ್ಗಾವಣೆಯ ಯೋಜನೆಯಾಗಿದೆ. ಇದನ್ನು ದೇಶಾದ್ಯಂತ ಜಾರಿಗೊಳಿಸುವ ಅಗತ್ಯ ಇದೆ ಎಂದರು.
ಪಂಚಖಾತ್ರಿ ಯೋಜನೆಗಳಿಂದ ದೊರೆಯುವ ಆರ್ಥಿಕ ನೆರವಿನಲ್ಲಿ ಮಹಿಳೆಯರು ದೈನಂದಿನ ಖರ್ಚುಗಳನ್ನು ನಿಬಾಯಿಸಿಕೊಳ್ಳಬಹುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಪುಸ್ತಕ ಖರೀದಿಸಬಹುದು. ಇದು ಜನಸಾಮಾನ್ಯರ ಜೀವನ ಮಟ್ಟವನ್ನು ಸುಧಾರಣೆ ಮಾಡಲಿದೆ ಎಂದು ಹೇಳಿದರು. ಮಹಿಳೆಯರು, ಹೆಣ್ಣು ಮಕ್ಕಳು ಸಮಾಜದ ಬೇರುಗಳಾಗಿದ್ದು, ಅವರನ್ನು ಸದೃಢಗೊಳಿಸದ ಹೊರತು ರಾಜ್ಯವನ್ನು ಬಲಿಷ್ಠಗೊಳಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಪಂಚಖಾತ್ರಿ ಯೋಜನೆಯನ್ನು ಜಾರಿಗೊಳಿಸಿದೆ ಎಂದು ಹೇಳಿದರು.
ಬೇರುಗಳು ಸದೃಢವಾಗದಿದ್ದರೆ ಮರ ದೃಢವಾಗಿ ನಿಲ್ಲಲು ಆಗುವುದಿಲ್ಲ. ಬುಡ ಭದ್ರವಾಗಿದ್ದರೆ ಬಿರುಗಾಳಿ, ಚಂಡಮಾರುತ ಏನೇ ಬಂದರೂ ಮರ ದಿಟ್ಟವಾಗಿ ನಿಂತಿರುತ್ತದೆ. ಬೇರು ಸಡಿಲವಾಗಿದ್ದರೆ ಬಿದ್ದು ಹೋಗುತ್ತದೆ. ಬಲಿಷ್ಠ ಮನೆ ನಿರ್ಮಾಣಕ್ಕೆ ತಳಪಾಯ ಗಟ್ಟಿಯಾಗಿರಬೇಕು. ಈ ಪರಿಕಲ್ಪನೆಯಲ್ಲಿ ಕಾಂಗ್ರೆಸ್ ಯೋಜನೆಗಳನ್ನು ರೂಪಿಸಿದೆ ಎಂದರು.

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆಯಿಂದ ಹೆಚ್ಚು ಸಮಸ್ಯೆ ಅನುಭವಿಸುತ್ತಿದ್ದರು. ಹಣದುಬ್ಬರದ ಪೆಟ್ಟಿನಿಂದ ಸಮಸ್ಯೆಗೊಳಗಾದ ಮಹಿಳೆಯರನ್ನು ಸಶಕ್ತಗೊಳಿಸಲು ಶಕ್ತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ ಯೋಜನೆಗಳು ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸುತ್ತಿದೆ ಎಂದು ಹೇಳಿದರು.
ದೆಹಲಿಯಲ್ಲಿರುವ ಕೇಂದ್ರ ಸರ್ಕಾರ ಕೋಟ್ಯಾಧೀಶರಿಗೆ ಮತ್ತು ತನ್ನ ಒಂದಿಬ್ಬರು ಆತ್ಮೀಯ ಮಿತ್ರರಿಗಷ್ಟೇ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಎಲ್ಲರನ್ನೂ ಒಳಗೊಂಡಂತಹ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಯಾರೂ ಹಿಂದುಳಿಯಬಾರದು ಎಂಬ ಕಾರಣಕ್ಕಾಗಿ ಸರ್ವರನ್ನೂ ಒಳಗೊಳ್ಳುವ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದರು.
ಕಾಂಗ್ರೆಸ್ ಪಕ್ಷ ಜಾರಿಗೊಳಿಸುವ ಸಾಧ್ಯತೆ ಇರುವ ಭರವಸೆಗಳನ್ನು ಮಾತ್ರ ನೀಡುತ್ತದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತದೆ. ಇದಕ್ಕೆ ಕರ್ನಾಟಕವೇ ಉದಾಹರಣೆ ಎಂದು ಹೇಳಿದರು. ಪಂಚಖಾತ್ರಿ ಯೋಜನೆಗಳನ್ನು ಬುದ್ಧಿಜೀವಿಗಳ ಸಮಿತಿ ಅಥವಾ ಬಂಡವಾಳಶಾಹಿಗಳ ಸಲಹೆ ಮೇರೆಗೆ ರೂಪಿಸಿಲ್ಲ. ಭಾರತ್ ಜೋಡೊ ಯಾತ್ರೆಯಲ್ಲಿ ತಾವು ಲಕ್ಷಾಂತರ ಮಹಿಳೆಯರ ಜೊತೆ ಸಂವಾದ ನಡೆಸಿದ್ದು, ಆ ವೇಳೆ ಬೆಲೆ ಏರಿಕೆಯ ಬಗ್ಗೆ ತೀವ್ರ ಆತಂಕವನ್ನು ತೋಡಿಕೊಂಡಿದ್ದರು. ಅದನ್ನು ಸರಿಪಡಿಸಲು ಪಂಚಖಾತ್ರಿ ಯೋಜನೆಗಳನ್ನು ರೂಪಿಸಲಾಯಿತು. ರಾಜ್ಯದಲ್ಲಿ ತಾವು 650 ಕಿಲೋ ಮೀಟರ್ ಪಾದಯಾತ್ರೆ ನಡೆಸಿ ವಿವಿಧ ಸ್ತರಗಳ ಜನರೊಂದಿಗೆ ಸಂವಾದ ನಡೆಸಿದ್ದಾಗಿ ತಿಳಿಸಿದರು.
ರಾಜ್ಯದ ಸಹೋದರಿಯರಿಗೆ ರಕ್ಷಾ ಬಂಧನದ ಶುಭಾಶಯಗಳು ಎಂದು ರಾಹುಲ್ಗಾಂಧಿ ಹೇಳಿದರು. ಇದೇ ವೇಳೆ ಫಲಾನುಭವಿ ಮಹಿಳೆಯರಿಗೆ ಕ್ಯೂ ಆರ್ ಕೋಡ್ ಇರುವ ಡಿಜಿಟಲ್ ಕಾರ್ಡ್ಗಳನ್ನು ವಿತರಿಸಲಾಯಿತು.

