ಗೋದಾವರಿ: ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಮರೆಯಲಾಗದ ಅನುಭವ. ಹಾಗಾಗಿ ಕೆಲವರು ಮದುವೆ ಸಮಾರಂಭವನ್ನು ತಮ್ಮ ಜೀವನದುದ್ದಕ್ಕೂ ಸಿಹಿ ಸಂಕೇತವಾಗಿಸಲು ವಿನೂತನವಾಗಿ ಯೋಚಿಸುತ್ತಾರೆ. ಆಮಂತ್ರಣ ಪತ್ರಿಕೆಯಿಂದ ಹಿಡಿದು ಔತಣಕೂಟದದಲ್ಲಿ ಏನಾದರೂ ವಿಶೇಷತೆಯನ್ನು ವ್ಯಕ್ತಪಡಿಸಲು ಪ್ರಯತ್ನಿಸುತ್ತಾರೆ. ಅದೇ ರೀತಿ ಪಶ್ಚಿಮ ಗೋದಾವರಿ ಜಿಲ್ಲೆಯ ಯುವಕನೊಬ್ಬ ತನ್ನ ಮದುವೆ ಆಮಂತ್ರಣವನ್ನು ವಿನೂತನವಾಗಿ ಪ್ರಿಂಟ್ ಹಾಕಿಸಿ ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದಾನೆ.
ಪೆನುಮಂತ್ರ ಮಂಡಲ ಸಮೀಪದ ಚಿರ್ಲಾ ಕೃಷ್ಣಾರೆಡ್ಡಿ ಹಾಗೂ ಸಿರಿಶಾ ವಿವಾಹವನ್ನು ಸೆ.2ಕ್ಕೆ ನಿಗದಿ ಮಾಡಲಾಗಿದ್ದು, ಯುವಕ ಎಟಿಎಂ ಕಾರ್ಡ್ನ ಗಾತ್ರದಲ್ಲಿ ಮದುವೆ ಕಾರ್ಡ್ ಪ್ರಿಂಟ್ ಹಾಕಿಸಿದ್ದಾನೆ. ಅಲ್ಲದೇ ಈ ಕಾರ್ಡ್ನಲ್ಲಿ ಕ್ಯೂಆರ್ ಕೋಡ್ ಮುದ್ರಿಸಿದ್ದು, ಈ ಕಾರ್ಡ್ಗಳನ್ನು ತಮ್ಮ ಸಂಬಂಧಿಕರು ಮತ್ತು ಸ್ನೇಹಿತರಿಗೆ ಕೊಟ್ಟು ಮದುವೆಗೆ ಆಹ್ವಾನಿಸಿದ್ದಾರೆ.
ಆ ಕಾರ್ಡ್ನಲ್ಲಿರುವ ವಿವರಗಳನ್ನು ತಿಳಿದುಕೊಳ್ಳಲು ನೀವು ಮೊಬೈಲ್ ಫೋನ್ ಹೊಂದಿರಬೇಕಾಗಿದ್ದು, ಕ್ಯೂಆರ್ ಕೋಡ್ನ್ನು ಸ್ಕ್ಯಾನ್ ಮಾಡುವ ಮೂಲಕ ಮದುವೆ ಸಮಾರಂಭದ ವಿವರಗಳು ಸೇರಿದಂತೆ, ಕಲ್ಯಾಣ ಮಂಟಪದ ಸ್ಥಳ, ಊಟದ ಸಮಯ ಇತ್ಯಾದಿಗಳನ್ನು ಪ್ರದರ್ಶಿಸುವಂತೆ ಮಾಡಲಾಗಿದೆ. ಜತೆಗೆ ವಧು ಮತ್ತು ವರನ ಫ್ರೀ ವೆಡ್ಡಿಂಗ್ ಶೂಟ್ ಪೋಟೊಗಳನ್ನು ಸಹ ನೋಡಬಹುದಾಗಿದ್ದು, ಎಟಿಎಂ ಕಾರ್ಡ್ ಗಾತ್ರದ ಈ ಆಮಂತ್ರಣ ಪತ್ರ ನೋಡಲು ಆಕರ್ಷಕವಾಗಿದೆ.
ಇದೀಗ ಈ ಕಾರ್ಡ್ ವೈರಲ್ ಆಗುತ್ತಿದ್ದು, ಇದನ್ನು ಬೆಂಗಳೂರಿನಲ್ಲಿ ವಿಶೇಷವಾಗಿ ಮುದ್ರಿಸಲಾಗಿದೆ. ಈ ಕಾರ್ಡ್ ಸಿದ್ಧಪಡಿಸಲು ಸುಮಾರು 20 ದಿನಗಳನ್ನು ಬೇಕಾಯಿತು ಎಂದು ಹೇಳಲಾಗಿದೆ.