ಹುಬ್ಬಳ್ಳಿ : ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 450 ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್ಸುಗಳ ಕಾರ್ಯಾಚರಣೆ ಮಾಡಲು ಯೋಜಿಸಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ತಿಳಿಸಿದ್ದಾರೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಪ್ರಸ್ತುತ 4830 ಬಸ್ಸುಗಳಿವೆ. 4539 ಅನುಸೂಚಿಗಳ ಮೂಲಕ ಪ್ರತಿದಿನ ಸರಾಸರಿ 15 ಲಕ್ಷ ಕಿಲೋಮೀಟರ್ ಕಾರ್ಯಚರಣೆ ಮಾಡಲಾಗುತ್ತಿದೆ.
ಶಕ್ತಿ ಯೋಜನೆಗೆ ಮೊದಲು ನಿತ್ಯ 17.48 ಲಕ್ಷ ಜನರು ಪ್ರಯಾಣ ಮಾಡುತ್ತಿದ್ದರು.ಶಕ್ತಿ ಯೋಜನೆ ಜಾರಿಯಾದ ನಂತರ ಪ್ರಯಾಣಿಕರ ಸಂಖ್ಯೆ 24 ರಿಂದ 26 ಲಕ್ಷಕ್ಕೆ ಹೆಚ್ಚಳವಾಗಿದೆ. ನಗರ ಸಾರಿಗೆ ವ್ಯಾಪ್ತಿಯಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಬಹಳಷ್ಟು ಏರಿಕೆಯಾಗಿದೆ.
ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲು ಕ್ರಮವಹಿಸಲಾಗುತ್ತಿದೆ. ಅದರ ಭಾಗವಾಗಿ ಒಟ್ಟು 450 ಎಲೆಕ್ಟ್ರಿಕ್ ಬಸ್ಸುಗಳ ಕಾರ್ಯಾಚರಣೆ ಮಾಡಲು
ಯೋಜಿಸಲಾಗಿದೆ. ಅವುಗಳಲ್ಲಿ 200 ಗ್ರಾಮಾಂತರ ಸಾರಿಗೆ
ಬಸ್ ಗಳು, 150 ನಗರ ಸಾರಿಗೆ ಮಾದರಿ ಹಾಗೂ 100 ಬಿ. ಆರ್. ಟಿ.ಎಸ್. ಮಾದರಿಯ ಬಸ್ ಗಳು ಸೇರಿವೆ. ಗ್ರಾಮಾಂತರ ಹಾಗೂ ನಗರ ಸಾರಿಗೆ ಬಸ್ಸುಗಳನ್ನು ಹು-ಧಾ ನಗರ ಸಾರಿಗೆ ವಿಭಾಗ,ಹುಬ್ಬಳ್ಳಿ ಗ್ರಾಮಾಂತರ,ಧಾರವಾಡ ಹಾಗೂ ಬೆಳಗಾವಿ ವಿಭಾಗಗಳಿಂದ ಕಾರ್ಯಾಚರಣೆ ಮಾಡಲಾಗುವುದು. ಬಿ.ಆರ್.ಟಿ.ಎಸ್. ಮಾದರಿಯ ಬಸ್ ಗಳ ಕಾರ್ಯಚರಣೆ ಕುರಿತು ಟೆಂಡರ್ ಫಲಿತಾಂಶದ ಆಧಾರದ ಮೇಲೆ ಹೆಚ್. ಡಿ. ಬಿ.ಆರ್. ಟಿ.ಎಸ್. ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು.
ಜಿ.ಸಿ.ಸಿ. ಮಾದರಿಯಲ್ಲಿ ಕಾರ್ಯಾಚರಣೆ
ಈ ಬಸ್ಸುಗಳನ್ನು ಜಿ.ಸಿ.ಸಿ.(ಗ್ರಾಸ್ ಕಾಸ್ಟ್ ಕಾಂಟ್ರ್ಯಾಂಕ್ಟ್) ಮಾದರಿಯಲ್ಲಿ ಕಾರ್ಯಚರಣೆ ಮಾಡಲಾಗುವುದು. ಬಸ್ ಕಾರ್ಯಾಚರಣೆ ಕಿ.ಮೀ.ಆಧಾರದ ಮೇಲೆ ಸಂಸ್ಥೆಯು ಕಂಪನಿಗೆ ಹಣ ಪಾವತಿಸಲಿದೆ.
ಸಂಸ್ಥೆಯ ಪ್ರಸ್ತಾವನೆಗೆ ಸರ್ಕಾರದ ಅನುಮೋದನೆ
ಸಂಸ್ಥೆಯ ವ್ಯಾಪ್ತಿಯ ಪ್ರಮುಖ ನಗರಗಳಲ್ಲಿ ಎಲೆಕ್ಟ್ರಿಕ್ ಬಸ್ಸುಗಳ ಕಾರ್ಯಚರಣೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಕುರಿತಂತೆ ಟೆಂಡರ್ ನಡೆಸಲು ಸರ್ಕಾರ ಅನುಮೋದನೆ ನೀಡಿದೆ. ಟೆಂಡರ್ ನಿಬಂಧನೆಗಳನ್ನು ಅಂತಿಮಗೊಳಿಸಿ ಶೀಘ್ರದಲ್ಲಿ ಟೆಂಡರ್ ಹೊರಡಿಸಲಾಗುವುದು. ನಂತರ ವಿವರಗಳನ್ನು ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗುವುದು.
ನಗರ ಸಾರಿಗೆ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಎಲೆಕ್ಟ್ರಿಕ್ ಬಸ್ ಗಳ ಕಾರ್ಯಾಚರಣೆ ಬಗ್ಗೆ ಅಗತ್ಯ
ಮಾಹಿತಿ ಪಡೆಯಲು ಸಂಸ್ಥೆಯ ಅಧಿಕಾರಿಗಳ ತಂಡವನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹಾಗೂ ಕ.ರಾ.ರ.ಸಾ.ನಿಗಮಕ್ಕೆ ನಿಯೋಜಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.