ದಾವಣಗೆರೆ : ರಾಜಕೀಯವಾಗಿ ಯಾರು ಬೆಳೆಯುತ್ತಾರೋ ಅವರನ್ನು ಕತ್ತರಿಸುತ್ತಾರೆ. ಯಾರು ಬಕೆಟ್ ಹಿಡಿಯುತ್ತಾರೋ ಅವರನ್ನು ಬೆಳೆಸುತ್ತಾರೆ. ಬಿವೈ ವಿಜಯೇಂದ್ರ ಅವರಿಗೆ ಸಾಮರ್ಥ್ಯ ಇದೇ ಅವರಿಗೆ ಅವಕಾಶ ಕೊಡುತ್ತಿಲ್ಲ ಎಂದು ಹೊನ್ನಾಳಿಯ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಮತ್ತೊಮ್ಮೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಕಡೆಗಣಿಸಿದ್ದೇ ಬಿಜೆಪಿಗೆ ಶಾಪವಾಗಿ ಪರಿಣಮಿಸಿದೆ. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸಲಾಯಿತು. ಇದರ ಪರಿಣಾಮ ಪಕ್ಷಕ್ಕೆ ಭಾರೀ ಹಾನಿಯಾಗಿದೆ. ಕರ್ನಾಟಕದಲ್ಲಿ ನಾವು ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುತ್ತೇವೆ ಎಂದು ಹೇಳಿದ್ದೆವು. ಆದರೆ, ಇಂದು ನಮ್ಮ ಪಕ್ಷಕ್ಕೆ ಅದೇ ಪರಿಸ್ಥಿತಿ ಬಂದಿದೆ ಎಂದು ಸ್ವಪಕ್ಷೀಯರ ವಿರುದ್ಧವೇ ಅವರು ಗುಡುಗಿದರು.
ಸರ್ಕಾರ ರಚನೆಯಾಗಿ 100 ದಿನ ಪೂರೈಸಿದರೂ ಅಧಿಕೃತ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ. ಈ ಬೆಳವಣಿಗೆ ಕಾರ್ಯಕರ್ತರಿಗೆ ನೋವುಂಟು ಮಾಡಿದೆ. ಕಾಂಗ್ರೆಸ್ ಮಾಡುವ ಆರೋಪಗಳಿಗೆ ನಾವು ಉತ್ತರ ಕೊಡಲಾಗದ ಸ್ಥಿತಿಗೆ ಬಂದಿದ್ದೇವೆ ಎಂದು ಎಂಪಿ ರೇಣುಕಾಚಾರ್ಯ ವಿಷಾದಿಸಿದರು.
ಕೇಂದ್ರ ಸರ್ಕಾರದ ಸಾಧನೆಗಳ ಕರಪತ್ರವನ್ನು ನಾನು ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕಿನ ಪ್ರತಿಯೊಂದು ಹಳ್ಳಿಗೂ ತಲುಪಿಸುವ ಕೆಲಸ ನಾನು ಮಾಡಿದ್ದೇನೆ. ನಾನು ಬಿಜೆಪಿ ಬಿಡುತ್ತೇನೆಂದು ಎಲ್ಲೂ ಹೇಳಿಲ್ಲ. ಬಿಜೆಪಿ ಕಚೇರಿಯಿಂದ ರೇಣುಕಾಚಾರ್ಯ ಕಾಂಗ್ರೆಸ್ ಸೇರುತ್ತಿದ್ದಾರೆಂದು ಅಪಪ್ರಚಾರ ಮಾಡಲಾಗುತ್ತದೆ. ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತೇನೆ ಎಂದು ಎಲ್ಲೂ ಹೇಳಿಲ್ಲ. ನಾನು ಕ್ಷೇತ್ರದ ಸಮಸ್ಯೆಗಾಗಿ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದರೆ ತಪ್ಪೇನು ಎಂದು ಪ್ರಶ್ನೆ ಮಾಡಿದರು.
ರಾಜ್ಯದ ಅಧ್ಯಕ್ಷರ ಅವಧಿ ಮುಗಿದರೂ ಇನ್ನೂ ರಾಜ್ಯಾಧ್ಯಕ್ಷರ ನೇಮಕ ಮಾಡಿಲ್ಲ. ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲ. ಇದರಿಂದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಮನಸ್ಸಿಗೆ ಬಹಳ ಬೇಸರವಾಗಿದೆ. ಕೆಲವರು ಪತ್ರಿಕಾ ಹೇಳಿಕೆ ನೀಡುವಸಂಗ್ ಟೈಗರ್ಸ್‍ಗಳಾಗಿದ್ದಾರೆ. ಪಕ್ಷ ನನಗೆ ತಾಯಿ ಸಮಾನ ಆ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಕೆಲ ನಾಯಕರ ನಡೆಯಿಂದ ನನ್ನ ಮನಸ್ಸಿಗೆ ನೋವುಂಟಾಗಿದೆ ಅದನ್ನು ಖಂಡಿಸುತ್ತೇನೆ ಎಂದರು.
ರೇಣುಕಾಚಾರ್ಯ ಬೆಳೆಯುತ್ತಾನೆಂದು ತುಳಿಯುವ ಕೆಲಸ ಮಾಡಿದರು. ನಾನು ಮಾತನಾಡಿದ ತಕ್ಷಣ ರೇಣುಕಾಚಾರ್ಯ ಪಕ್ಷ ಬಿಡುತ್ತಾನೆಂದು ಸುದ್ದಿ ಹಬ್ಬಿಸುತ್ತಿದ್ದಾರೆ. ಯಾರು ರಾಜಕೀಯವಾಗಿ ಬೆಳೆಯುತ್ತಾರೋ ಅವರನ್ನು ಕತ್ತರಿಸುತ್ತಾರೆ. ಯಾರು ಬಕೆಟ್ ಹಿಡಿಯುತ್ತಾರೋ ಅವರನ್ನು ಬೆಳೆಸುತ್ತಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಪುತ್ರ ಹಾಗೂ ಶಾಸಕ ಬಿವೈ ವಿಜಯೇಂದ್ರ ಅವರಿಗೆ ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯವಿದೆ. ಆದರೆ, ಅವರಿಗೆ ಅವಕಾಶ ಕೊಡುತಿಲ್ಲ ಎಂದು ಎಂಪಿ ರೇಣುಕಾಚಾರ್ಯ ಅಸಮಾಧಾನ ಹೊರಹಾಕಿದರು.