ನವದೆಹಲಿ : ದೇಶದ ಹಣಕಾಸು ವ್ಯವಹಾರಗಳಿಗೆ ಸಂಬಂಧಪಟ್ಟಂತೆ ಸಲಹೆಗಳನ್ನು ನೀಡಲು ಪೂರಕವಾಗಿ ನವೆಂಬರ್ ಅಂತ್ಯದ ವೇಳೆಗೆ 16ನೇ ಹಣಕಾಸು ಆಯೋಗವನ್ನು ರಚಿಸಲು ನಿರ್ಧರಿಸಲಾಗಿದೆ.
ಹಣಕಾಸು ಇಲಾಖೆಯ ಕಾರ್ಯದರ್ಶಿ ಟಿ.ವಿ.ಸೋಮನಾಥ್ ಅವರು ಈ ಬಗ್ಗೆ ಹೇಳಿಕೆ ನೀಡಿದ್ದು, ಹಣಕಾಸು ಆಯೋಗ ಸಾಂವಿಧಾನಿಕ ಸಂಸ್ಥೆಯಾಗಿದೆ.
ಈವರೆಗೂ 15 ಆಯೋಗಗಳು ಪೂರ್ಣಗೊಂಡಿವೆ. 2026 ರ ಏಪ್ರಿಲ್ 1 ರಿಂದ ಪ್ರಾರಂಭವಾಗುವಂತೆ ಕೇಂದ್ರ ಮತ್ತು ರಾಜ್ಯಗಳ ನಡುವಿನ ತೆರಿಗೆ ಹಂಚಿಕೆ ಅನುಪಾತವನ್ನು ಮುಂದಿನ 5 ವರ್ಷಗಳವರೆಗೆ ನಿರ್ಧರಿಸಲು ನೂತನ ಆಯೋಗ ಶಿಫಾರಸ್ಸು ಮಾಡಲಿದೆ.
2021-22 ರಿಂದ 2025-26 ರ ನಡುವಿನ 5 ವರ್ಷಗಳ ತೆರಿಗೆ ಹಂಚಿಕೆ ಅನುಪಾತದ ವರದಿಯನ್ನು ಹಿಂದಿನ ಆಯೋಗದ ಅಧ್ಯಕ್ಷ ಎನ್.ಕೆ.ಸಿಂಗ್ ನೇತೃತ್ವದಲ್ಲಿ 2020 ರ ನವೆಂಬರ್ 9 ರಂದು ರಾಷ್ಟ್ರಪತಿಯವರಿಗೆ ಸಲ್ಲಿಸಲಾಗಿತ್ತು. ಅದರ ಪ್ರಕಾರ 14ನೇ ಆಯೋಗದ ಸೂಚನೆಯಂತೆ 15ನೇ ಆಯೋಗವು ತೆರಿಗೆ ಹಂಚಿಕೆ ಅನುಪಾತವನ್ನು ಶೇ. 42 ರಲ್ಲೇ ಮುಂದುವರೆಸಿತ್ತು.
ಕೇಂದ್ರ ಸರ್ಕಾರ ಅದನ್ನು ಒಪ್ಪಿಕೊಂಡು ರಾಜ್ಯಗಳಿಗೆ ಅನುದಾನ ಬಿಡುಗಡೆ ಮಾಡುತ್ತಿತ್ತು. ಹಳೆಯ ವರದಿಯಲ್ಲಿ ವಿತ್ತಿಯ ಕೊರತೆ, ಕೇಂದ್ರ ಮತ್ತು ರಾಜ್ಯದ ಸಾಲದ ಹಾದಿ ವಿದ್ಯುತ್ ವಲಯದ ಸುಧಾರಣೆ ರಾಜ್ಯಗಳಿಗೆ ಹೆಚ್ಚುವರಿ ಸಾಲದ ಸೌಲಭ್ಯ ಸೇರಿದಂತೆ ಹಲವಾರು ಶಿಫಾರಸ್ಸುಗಳಿದ್ದವು.
ಒಟ್ಟು ಆಂತರಿಕ ಉತ್ಪನ್ನದಲ್ಲಿ ವಿತ್ತೀಯ ಕೊರತೆಯನ್ನು. ಶೇ. 4.5 ರ ಮಿತಿಯಲ್ಲಿ ನಿರ್ವಹಣೆ ಮಾಡಲು ಮಾರ್ಗಸೂಚಿ ರೂಪಿಸಲಾಗಿತ್ತು. ಆದರೆ ವಿವಿಧ ಕಾರಣಗಳಿಗಾಗಿ ಅದು ಪ್ರಸಕ್ತ ವರ್ಷ ಶೇ. 5.9 ರಷ್ಟಾಗಿದೆ. ಮತ್ತೊಂದೆಡೆ ಜಿಡಿಪಿಯಲ್ಲೂ ಏರುಪೇರುಗಳು ಕಂಡುಬರುತ್ತಿದೆ.