8 ರ ವರ್ಷದ ಬಾಲಕ ಠಾಣೆಯ “ಏಕ್‌ ದಿನ್‌ ಕಾ ಇನ್ಸ್‌ಪೆಕ್ಟರ್‌”

ಸಮಗ್ರ ಪ್ರಭ ಸುದ್ದಿ
2 Min Read

ಶಿವಮೊಗ್ಗ: ‘ಏಕ್‌ ದಿನ್‌ ಕಾ ಸಿಎಂ’ ಚಿತ್ರ ಬಹುತೇಕರು ನೋಡಿರ ಬಹುದು. ಅದು ಬಾಲಿವುಡ್‌ ನಟ ಅನಿಲ್‌ ಕಪೂರ್‌ಗೆ ಒಲಿದು ಬಂದಿದ್ದ ಸದಾವಕಾಶ. ಇಲ್ಲೊಬ್ಬ ಬಾಲಕ ಸಹ ದೊಡ್ಡಪೇಟೆ ಠಾಣೆಯಲ್ಲಿ ಇನ್ಸ್‌ಪೆಕ್ಟರ್‌ ಆಗಿ ಒಂದು ದಿನ ಒಂದು ತಾಸು ಸಾಂಕೇತಿಕವಾಗಿ ಕಾರ್ಯ ನಿರ್ವಹಿಸಲು ಅವಕಾಶ ಪಡೆದದ್ದು ಕುತೂಹಲಕ್ಕೆ ಕಾರಣವಾಗಿತ್ತು.

ಈ ಹುಡುಗನಿಗೆ ಈಗ ಎಂಟೂವರೆ ವರ್ಷ. ಬೆಳೆದು ಸರ್ಕಲ್‌ ಇನ್ಸ್‌ಪೆಕ್ಟರ್‌ ಆಗಬೇಕೆಂಬ ಕನಸು. ಆದರೆ, ಹುಟ್ಟಿದ ಮೂರು ತಿಂಗಳಿಂದ ಶುರುವಾದ ಹೃದಯ ಸಂಬಂಧಿ ಕಾಯಿಲೆಯಿಂದಾಗಿ ಬಾಲಕನ ಆಸೆಯಂತೆ ಸಮವಸ್ತ್ರ ಧರಿಸಿ ಇನ್ಸ್‌ಪೆಕ್ಟರ್‌ ಕುರ್ಚಿಯ ಮೇಲೆ ಕುಳಿತು ಅಧಿಕಾರ ಚಲಾಯಿಸಿದ ಕ್ಷಣಕ್ಕೆ ದೊಡ್ಡಪೇಟೆ ಠಾಣೆ ಬುಧವಾರ ಸಾಕ್ಷಿಯಾಯಿತು.

ಮೂಲತಃ ಶಿವಮೊಗ್ಗದವರೇ ಆದರೂ ಬಾಳೆಹೊನ್ನೂರಿನಲ್ಲಿ ನೆಲೆಸಿರುವ ತಾಬ್ರೇಜ್‌ ಖಾನ್‌ ಮತ್ತು ನಗ್ಮಾ ಖಾನ್‌ ಅವರ ಪುತ್ರ ಅಜಾನ್‌ ಖಾನ್‌ ಅವರಿಗೆ ದೊಡ್ಡಪೇಟೆ ಠಾಣೆಯಲ್ಲಿ ಏಕ್‌ ದಿನ್‌ ಕಾ ಇನ್ಸ್‌ಪೆಕ್ಟರ್‌ ಆಗುವ ಅವಕಾಶವನ್ನು ಪೊಲೀಸ್‌ ಇಲಾಖೆ ನೀಡಿತ್ತು. ಮಗನು ಖಾಕಿ ತೊಟ್ಟು ಗತ್ತಿನಲ್ಲಿ ನಡೆಯುತ್ತಿರುವುದನ್ನು ನೋಡಿದ ತಾಯಿ ಕಣ್ಣೀರಾಗಿದ್ದರು. ಕುಟುಂಬದವರ ಕಣ್ಣಾಲಿ ತೇವಗೊಂಡಿದ್ದವು.

10 ಲಕ್ಷ ಜನರಿಗೆ ಒಬ್ಬರಲ್ಲಿ ಕಂಡುಬರುವ ಈ ಕಾಯಿಲೆಗೆ ಚಿಕಿತ್ಸೆಯೂ ಅಪರೂಪವೇ ಆಗಿದೆ. ಅಜಾನ್‌ ಹಸುಳೆಯಾಗಿದ್ದಾಗಿಂದಲೇ ಚಿಕಿತ್ಸೆ ನೀಡಲಾಗುತ್ತಿದ್ದು, ಆಂಜಿಯೋಗ್ರಾಂಮಾಡಿ ಕಾರಣವನ್ನು ಪತ್ತೆ ಹಚ್ಚಲಾ ಗಿದೆ. ಈತ ಸಂಪೂರ್ಣ ಗುಣಮುಖನಾಗಬೇಕಾದರೆ ಹೃದಯ ಮತ್ತು ಶ್ವಾಸಕೋಶದ ಕಸಿಯಾಗಬೇಕು. ಅದಕ್ಕೆ ದಾನಿಗಳು ಬೇಕು. ಜತೆಗೆ ಲಕ್ಷಾಂತರ ಹಣವೂ ಖರ್ಚಾಗುತ್ತದೆ.

ನಾಳೆಯಿಂದಲ್ಲ, ಇವತ್ತಿನಿಂದಲೇ ಕೆಲಸ ಮಾಡು!ಬಾಲಕ ಒಂದು ದಿನದ ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಿದ್ದಾಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿಕೆ ಮಿಥುನ್‌ ಕುಮಾರ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿಲ್‌ ಕುಮಾರ್‌ ಭೂಮರಡ್ಡಿ, ಪೊಲೀಸ್‌ ಅಧಿಕಾರಿಗಳಾದ ಬಾಲರಾಜ್‌, ಡಿ ಟಿ ಪ್ರಭು, ಅಂಜನ್‌ ಕುಮಾರ್‌ ಇತರರಿದ್ದರು. ಈ ವೇಳೆ ಬಾಲಕ ಅಜಾನ್‌ ಕಳ್ಳತನ ಯಾಕೆ ಮಾಡಿದ್ರಿ ಎಂದು ವ್ಯಕ್ತಿಯೊಬ್ಬರಿಗೆ ಕೇಳುವ ಪ್ರಸಂಗ ಎಲ್ಲರ ಗಮನ ಸೆಳೆಯಿತು. ಕಳ್ಳತನ ಯಾಕೆ ಮಾಡಿದ್ರಿ, ಕೆಲಸ ಮಾಡ್ಬೇಕು ಎಂದು ಬಾಲಕ ಹೇಳಿದಾಗ, ಆ ವ್ಯಕ್ತಿ ನಾಳೆಯಿಂದ ಕೆಲಸ ಮಾಡ್ತೀನಿ ಎಂದು ಹೇಳಿದೆ. ಆಗ ಅಜಾನ್‌ ನಾಳೆಯಿಂದಲ್ಲ, ಇವತ್ತಿನಿಂದಲೇ ಕೆಲಸ ಮಾಡಬೇಕು ಎಂದು ಹೇಳಿದ್ದರು ವಿಶೇಷವಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವಮೊಗ್ಗ ಎಸ್‌ಪಿ ಜಿಕೆ ಮಿಥುನ್‌ ಕುಮಾರ್‌, ಒಂದು ದಿನ ಪೊಲೀಸ್‌ ಆಗಬೇಕು ಎಂದು ಬಾಲಕನಿಗೆ ಆಸೆ ಇತ್ತು. ಈ ಕುರಿತು ಅವರ ತಂದೆ ಮನವಿ ಮಾಡಿದ್ದರು. ಈ ಹಿನ್ನೆಲೆ ಡಿವೈಎಸ್‌ಪಿ ಅವರಿಗೆ ತಿಳಿಸಿ ದೊಡ್ಡಪೇಟೆ ಠಾಣೆ ಇನ್ಸ್‌ಪೆಕ್ಟರ್‌ ಮಾಡಲಾಗಿದೆ. ಮಾನವೀಯ ನೆಲೆಯಲ್ಲಿ ಬಾಲಕನನ್ನು ಇನ್ಸ್‌ಪೆಕ್ಟರ್‌ ಮಾಡಿದ್ದೇವೆ. ಬಾಲಕ ತುಂಬ ಖುಷಿ ಪಟ್ಟಿದ್ದಾನೆ ಎಂದರು.

Share this Article