ಗದಗ : ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಹಮ್ಮಿಕೊಂಡ “ಹರ್ ಘರ್ ತಿರಂಗಾ” ಅಭಿಯಾನ ಯಶಸ್ವಿಗೊಳಿಸುವಂತೆ ಹಾಗೂ ಪ್ರತಿಯೊಬ್ಬರು ತಮ್ಮ ಮನೆಗಳ ಮೇಲೆ ರಾಷ್ಟ್ರ ಧ್ವಜಾರೋಹಣ ನೆರೆವೇರಿಸಿ ಗೌರವ ಸಲ್ಲಿಸುವಂತೆ ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್ ಅವರು ಕರೆ ನೀಡಿದ್ದಾರೆ.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಸೋಮವಾರದಂದು “ಹರ್ ಘರ್ ತಿರಂಗಾ” ಅಭಿಯಾನ ಅಂಗವಾಗಿ ಮಾತನಾಡಿದ ಅವರು, ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ “ನನ್ನ ಮಣ್ಣು ನನ್ನ ದೇಶ ” ಕಾರ್ಯಕ್ರಮದ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಸಾರ್ವಜನಿಕರೆಲ್ಲರೂ ಭಾರತದ ರಾಷ್ಟ್ರ ಧ್ವಜಾರೋಹಣವನ್ನು ತಮ್ಮ ಮನೆಗಳ ಮೇಲೆ ಮಾಡುವ ಮೂಲಕ ರಾಷ್ಟ್ರಭಕ್ತಿ ಪ್ರದರ್ಶಿಸುವ ಜೊತೆಗೆ ಗೌರವ ಸಲ್ಲಿಸುವಂತೆ ಅವರು ಸಲಹೆ ನೀಡಿದರು.
ರಾಷ್ಟ್ರ ಧ್ವಜಾರೋಹಣ ಸಂಧರ್ಭದಲ್ಲಿ ಧ್ವಜ ಸಂಹಿತೆಯನ್ನು ಪಾಲಿಸಿ, ಗೌರವ ಅರ್ಪಿಸಬೇಕು. ಸಾರ್ವಜನಿಕರು ಮನೆಗಳ ಮೇಲೆ, ಸರ್ಕಾರಿ ಕಚೇರಿಗಳ ಮೇಲೆ, ಸಾರ್ವಜನಿಕ ಸ್ಥಳಗಳು, ಉದ್ಯಮಗಳು, ಸಂಘ ಸಂಸ್ಥೆಗಳಲ್ಲಿ ಸ್ವಯಂ ಪ್ರೇರಿತರಾಗಿ ಧ್ವಜಾರೋಹಣ ಮಾಡಿ ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸಲು ಕರೆ ನೀಡಿದರು.

ಹರ್ ಘರ್ ತಿರಂಗಾ ರಾಷ್ಟ್ರಭಕ್ತಿಯ ದ್ಯೋತಕವಾಗಿದೆ. ಜಿಲ್ಲೆಯಲ್ಲಿ ಅಭೂತಪೂರ್ವವಾಗಿ ಯಶಸ್ವಿಗೊಳಿಸಬೇಕು. ಅದರಂತೆ ರಾಷ್ಟ್ರ ಧ್ವಜಾರೋಹಣ ಮಾಡಿದ ಬಗ್ಗೆ ಸೆಲ್ಫಿಗಳನ್ನು ಹರ್ ಘರ್ ತಿರಂಗಾ ಹ್ಯಾಶ್ ಟ್ಯಾಗ್ ಮೂಲಕ ವೆಬ್ ಸೈಟ್ ದಲ್ಲಿ ಅಪ್ಲೋಡ್ ಸಹ ಮಾಡುವಂತೆ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಉಪವಿಭಾಗಾಧಿಕಾರಿ ಡಾ. ವೆಂಕಟೇಶ ನಾಯ್ಕ, ತಹಶೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವಾಯ್.ಶೆಟ್ಟಪ್ಪನವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಅಭಿಯಾನದಲ್ಲಿ ಭಾಗವಹಿಸಿದ್ದರು.

