ಜುಲೈನಲ್ಲಿ ಮಾರುತಿ ಸುಜುಕಿ ವಾಹನಗಳ ಮಾರಾಟದಲ್ಲಿ ಏರಿಕೆ, ಟಾಟಾ ಮೋಟಾರ್ಸ್‌ ಸೇಲ್ಸ್‌ ಇಳಿಕೆ

ಸಮಗ್ರ ಪ್ರಭ ಸುದ್ದಿ
2 Min Read

ಹೊಸದಿಲ್ಲಿ: ಮಾರುತಿ ಸುಜುಕಿ ಇಂಡಿಯಾ ತನ್ನ ಜೂನ್‌ ಮಾಸಿಕ ವಾಹನ ಮಾರಾಟದ ಅಂಕಿ ಅಂಶಗಳನ್ನು ಮಂಗಳವಾರ ಬಿಡುಗಡೆ ಮಾಡಿದ್ದು, ಒಟ್ಟಾರೆ ಮಾರಾಟ ಶೇ. 3ರಷ್ಟು ಏರಿಕೆಯಾಗಿರುವುದಾಗಿ ಹೇಳಿದೆ. ಆದರೆ ಇದೇ ಅವಧಿಯಲ್ಲಿ ಟಾಟಾ ಮೋಟಾರ್ಸ್‌ ವಾಹನ ಮಾರಾಟ ಅಲ್ಪ ಕುಸಿತ ಕಂಡಿದೆ.

ಯುಟಿಲಿಟಿ ವಾಹನ ಶ್ರೇಣಿಯಲ್ಲಿ ಕಂಡು ಬಂದ ಹೆಚ್ಚಿನ ಬೇಡಿಕೆಯ ಹಿನ್ನಲೆಯಲ್ಲಿ ಜುಲೈನಲ್ಲಿ ಒಟ್ಟು 1,81,630 ವಾಹನಗಳನ್ನು ಮಾರಾಟ ಮಾಡಿರುವುದಾಗಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (ಎಂಎಸ್‌ಐಎಲ್‌) ಹೇಳಿಕೆಯಲ್ಲಿ ತಿಳಿಸಿದೆ. ಕಳೆದ ವರ್ಷದ ಇದೇ ತಿಂಗಳಿನಲ್ಲಿ ಕಂಪನಿಯು ತನ್ನ ಡೀಲರ್‌ಗಳಿಗೆ ಒಟ್ಟು 1,75,916 ವಾಹನಗಳನ್ನು ರವಾನಿಸಿತ್ತು.
ಕಳೆದ ವರ್ಷದ ಜುಲೈ ತಿಂಗಳಿಗೆ ಹೋಲಿಸಿದರೆ ಒಟ್ಟು ದೇಶೀಯ ಪ್ರಯಾಣಿಕ ವಾಹನಗಳ ಮಾರಾಟವು 1,42,850 ಯುನಿಟ್‌ಗಳಿಂದ 1,52,126 ಯುನಿಟ್‌ಗಳಿಗೆ ಏರಿಕೆ ಕಂಡಿದೆ. ಈ ಮೂಲಕ ಶೇ. 6 ರಷ್ಟು ಹೆಚ್ಚಾಗಿದೆ. ಆಲ್ಟೊ ಮತ್ತು ಎಸ್-ಪ್ರೆಸ್ಸೊ ಒಳಗೊಂಡಿರುವ ಮಿನಿ ವಿಭಾಗದ ಕಾರುಗಳ ಮಾರಾಟವು 20,333 ಯುನಿಟ್‌ಗಳಿಂದ 9,590 ಯುನಿಟ್‌ಗಳಿಗೆ ಇಳಿಕೆಯಾಗಿದೆ.

ಬ್ಯಾಲೆನೊ, ಸೆಲೆರಿಯೊ, ಡಿಜೈರ್, ಇಗ್ನಿಸ್ ಮತ್ತು ಸ್ವಿಫ್ಟ್ ಒಳಗೊಂಡ ಕಾಂಪ್ಯಾಕ್ಟ್ ಕಾರುಗಳ ಮಾರಾಟವು 84,818 ಯುನಿಟ್‌ಗಳಿಂದ 67,102 ಯುನಿಟ್‌ಗಳಿಗೆ ಇಳಿಕೆಯಾಗಿದ್ದು, ಶೇ. 21ರಷ್ಟು ಕುಸಿತ ಕಂಡಿದೆ.
ಇದೇ ಅವಧಿಯಲ್ಲಿ ಬ್ರೆಝಾ, ಎರ್ಟಿಗಾ, ಫ್ರಾಂಕ್ಸ್, ಗ್ರ್ಯಾಂಡ್ ವಿಟಾರಾ, ಜಿಮ್ನಿ ಮತ್ತು ಎಕ್ಸ್‌ಎಲ್‌6 ಅನ್ನು ಒಳಗೊಂಡಿರುವ ಯುಟಿಲಿಟಿ ವಾಹನಗಳ ಮಾರಾಟವು ಮೂರು ಪಟ್ಟು ಏರಿಕೆ ಕಂಡಿದ್ದು 62,049 ಯುನಿಟ್‌ಗಳಿಗೆ ತಲುಪಿದೆ. 2022ರ ಜುಲೈನಲ್ಲಿ ಕಂಪನಿ ಕೇವಲ 23,272 ಯುನಿಟ್‌ ವಾಹನಗಳನ್ನು ಮಾರಾಟ ಮಾಡಿತ್ತು. ಇದರಿಂದ ಕಂಪನಿಯ ಒಟ್ಟಾರೆ ಮಾರಾಟದಲ್ಲಿ ಭಾರೀ ಏರಿಕೆ ದಾಖಲಾಗಿದೆ.
ಇನ್ನು ಕಂಪನಿಯು ಇದೇ ಅವಧಿಯಲ್ಲಿ 22,199 ವಾಹನಗಳನ್ನು ರಫ್ತು ಮಾಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಕಂಪನಿ 20,311 ವಾಹನಗಳನ್ನು ರಫ್ತು ಮಾಡಿತ್ತು.
ಟಾಟಾ ಮೋಟಾರ್ಸ್‌ ವಾಹನ ಮಾರಾಟ ಇಳಿಕೆ
ಜುಲೈನಲ್ಲಿ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 80,633 ವಾಹನಗಳನ್ನು ಮಾರಾಟ ಮಾಡಿರುವುದಾಗಿ ಟಾಟಾ ಮೋಟಾರ್ಸ್ ಮಂಗಳವಾರ ತಿಳಿಸಿದೆ. 2022ರ ಜುಲೈನಲ್ಲಿ ಕಂಪನಿ 81,790 ವಾಹನಗಳ ಮಾರಾಟ ಮಾಡಿತ್ತು. ಇದಕ್ಕೆ ಹೋಲಿಸಿದರೆ ಕಂಪನಿಯ ವಾಹನ ಮಾರಾಟದಲ್ಲಿ ಶೇ. 1.4ರಷ್ಟು ಕುಸಿತ ದಾಖಲಾಗಿದೆ.

ಒಟ್ಟು ದೇಶೀಯ ಸಗಟು ಮಾರಾಟವು ಕಳೆದ ತಿಂಗಳು 78,978 ಯುನಿಟ್‌ಗಳಿಂದ 78,844 ಯುನಿಟ್‌ಗಳಿಗೆ ಇಳಿಕೆ ಕಂಡಿದ್ದು, ಅಲ್ಪ ಇಳಿಕೆ ದಾಖಲಾಗಿದೆ.
ಆದರೆ ಜುಲೈನಲ್ಲಿ ಒಟ್ಟು ವಾಣಿಜ್ಯ ವಾಹನಗಳ (ಸಿವಿ) ಮಾರಾಟವು ಶೇ. 4ರಷ್ಟು ಕುಸಿತ ಕಂಡು 34,154 ಯುನಿಟ್‌ಗಳಿಂದ 32,944 ಯುನಿಟ್‌ಗಳಿಗೆ ಇಳಿಕೆಯಾಗಿದೆ. ಇದು ಒಟ್ಟಾರೆ ಮಾರಾಟದ ಮೇಲೆ ಭಾರೀ ಪರಿಣಾಮ ಬೀರಿದೆ.
ಪ್ರಯಾಣಿಕ ವಾಹನ (ಪಿವಿ) ವಿಭಾಗದಲ್ಲಿ ಎಲೆಕ್ಟ್ರಿಕ್ ವೆಹಿಕಲ್ಸ್ (ಇವಿ) ಮಾರಾಟ ಭಾರೀ ಏರಿಕೆ ಕಂಡಿದೆ. ಇದು 4,151 ಯುನಿಟ್‌ಗಳಿಂದ 6,329 ಯುನಿಟ್‌ಗಳಿಗೆ ಏರಿಕೆ ಕಂಡಿದ್ದು, ಶೇ. 53ರಷ್ಟು ಹೆಚ್ಚಳವಾಗಿದೆ.
ಒಟ್ಟಾರೆ ಕಂಪನಿಯ ಪ್ರಯಾಣಿಕ ವಾಹನಗಳ ಮಾರಾಟವು 47,636 ಯುನಿಟ್‌ಗಳಿಂದ 47,689 ಯುನಿಟ್‌ಗಳಿಗೆ ತಲುಪಿದ್ದು, ಅಲ್ಪ ಏರಿಕೆ ದಾಖಲಾಗಿದೆ. 

Share this Article