ಬೆಂಗಳೂರು: ಗೃಹ ಇಲಾಖೆಯಲ್ಲಿ ಪಿಎಸ್ಐ, ಕಾನ್ಸ್ಟೆಬಲ್ ಸೇರಿದಂತೆ 20 ಸಾವಿರ ಹುದ್ದೆಗಳು ಖಾಲಿ ಇದ್ದು, 600ರಿಂದ 700 ಎಎಸ್ಐಗಳಿಗೆ ಪಿಎಸ್ಐ ಹುದ್ದೆಗೆ ಬಡ್ತಿ ನೀಡಲು ಉದ್ದೇಶಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ಐ ನೇಮಕಾತಿ ಹಗರಣ ಒಂದೆಡೆ ತನಿಖೆ ನಡೆಯುತ್ತಿದೆ. ಮತ್ತೊಂದೆಡೆ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. 557 ಪಿಎಸ್ಐ ನೇಮಕಾತಿ ಕುರಿತಂತೆ ನ್ಯಾಯಾಲಯದ ನಿರ್ದೇಶನವನ್ನು ಕೋರಲಾಗಿದೆ. ಹೊಸದಾಗಿ 400ಪಿಎಸ್ಐ ನೇಮಕಾತಿ ಮಾಡಬೇಕಿದೆ. ನ್ಯಾಯಾಲಯದಲ್ಲಿ ಬಾಕಿ ಇರುವ ಪಿಎಸ್ಐ ನೇಮಕಾತಿ ಪ್ರಕರಣ ಇತ್ಯರ್ಥವಾಗದೆ ಹೊಸ ನೇಮಕಾತಿ ಮಾಡಿದರೆ ಸೇವಾ ಜ್ಯೇಷ್ಠತೆ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಸೇವೆಯಲ್ಲಿರುವ ಎಎಸ್ಐಗಳಿಗೆ ಅವರ ಅನುಭವ, ಹಿರಿತನದ ಆಧಾರದ ಮೇಲೆ ಬಡ್ತಿ ನೀಡಲು ಉದ್ದೇಶಿಸಲಾಗಿದೆ ಎಂದರು.
ಅಲ್ಲದೆ, 16ಸಾವಿರ ಕಾನ್ಸ್ಟೆಬಲ್ ಹುದ್ದೆಗಳು ಖಾಲಿ ಇವೆ. ಬೆಂಗಳೂರು ನಗರಕ್ಕೆ 2500 ಕಾನ್ಸ್ಟೆಬಲ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆ ಅನುಮತಿ ನೀಡಿದೆ. ಇದಲ್ಲದೆ, ಬೆಂಗಳೂರು ಹೊರತು ರಾಜ್ಯದಲ್ಲಿ 3500 ಕಾನ್ಸ್ಟೆಬಲ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗು ವುದು. ವಾರ್ಷಿಕ 2500ರಿಂದ 3000 ಹುದ್ದೆಗಳು ನಿವೃತ್ತಿಯಿಂದ ತೆರವಾಗುತ್ತವೆ. ಹೀಗಾಗಿ ಹುದ್ದೆಗಳ ಕೊರತೆ ಉಂಟಾಗಿ ಸಮಸ್ಯೆಯಾಗುತ್ತದೆ ಎಂದು ತಿಳಿಸಿದರು.