ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಅನುಸೂಚಿತ ಜಾತಿ / ಅನುಸೂಚಿತ ಬುಡಕಟ್ಟುಗಳ ರಾಜ್ಯ ಅಭಿವೃದ್ಧಿ ಪರಿಷತ್ ಸಭೆಯಲ್ಲಿ 2023-24ನೇ ಸಾಲಿನ ಎಸ್.ಸಿ.ಎಸ್.ಪಿ./ ಟಿ.ಎಸ್.ಪಿ. ಅಡಿ 34,293.69 ಕೋಟಿ ರೂ. ಗಳ ಕ್ರಿಯಾ ಯೋಜನೆಯನ್ನು ಅನುಮೋದಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಎಸ್.ಸಿ.ಎಸ್.ಪಿ./ ಟಿಎಸ್.ಪಿ. ಅನುದಾನ ಖರ್ಚು ಮಾಡದಿದ್ದರೆ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಯ್ದೆ ಹೇಳುತ್ತದೆ. ಕಾಯ್ದೆ ಗಂಭೀರವಾಗಿದೆ. ಅದರಂತೆ ಯಾರು ನಿರ್ಲಕ್ಷ್ಯ ಮಾಡುತ್ತಾರೆ, ಅವರ ವಿರುದ್ಧ ಕಾಯ್ದೆಯನ್ವಯ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಪ್ರತಿ ಇಲಾಖೆಯು ಎಸ್.ಸಿ.ಎಸ್.ಪಿ. / ಟಿ.ಎಸ್.ಪಿ. ಯೋಜನೆಗಳ ಅನುಷ್ಠಾನದ ನಂತರ ಪರಿಣಾಮದ ಮೌಲ್ಯಮಾಪನ ವರದಿಯನ್ನೂ ಸಿದ್ಧಪಡಿಸಿ ಫಲಾನುಭವಿಗಳ ಸ್ಥಿತಿಗತಿಯಲ್ಲಿ ಆಗಿರುವ ಬದಲಾವಣೆ ಕುರಿತು ಮಾಹಿತಿ ಸಲ್ಲಿಸಬೇಕು ಎಂದು ಅಕಾರಿಗಳಿಗೆ ತಿಳಿಸಿದರು.
ಸಭೆಯ ಮುಖ್ಯಾಂಶಗಳು:
ಪ್ರಸಕ್ತ ಸಾಲಿನಲ್ಲಿ ರಾಜ್ಯದ ಒಟ್ಟು ಆಯವ್ಯಯ ಗಾತ್ರ 3.28 ಲಕ್ಷ ಕೋಟಿ ರೂ. ಆಗಿದ್ದು, ಇದರಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ನಿಗದಿ ಪಡಿಸಿದ ಆಯವ್ಯಯ 1.42 ಲಕ್ಷ ಕೋಟಿ ರೂ. ನಷ್ಟಿದೆ. ಇದರಲ್ಲಿ ಎಸ್.ಸಿ.ಎಸ್.ಪಿ./ ಟಿ.ಎಸ್.ಪಿ. ಗೆ ಶೇ. 24.10 ಅನುದಾನ ಅಂದರೆ ಒಟ್ಟು 34,221.49 ಕೋಟಿ ರೂ. ಹಾಗೂ ಹಿಂದಿನ ವರ್ಷ ಬಳಕೆಯಾಗದ ಮೊತ್ತ 72.20 ಕೋಟಿ ರೂ. ಸೇರಿಸಿ, 34,293.69 ಕೋಟಿ ರೂ. ಅನುದಾನವನ್ನು ನೀಡಲಾಗಿದೆ. ಇದರಲ್ಲಿ ಶೇ. 84 ರಾಜಸ್ವ ಹಾಗೂ ಶೇ. 16 ಬಂಡವಾಳ ಮೇಲಿನ ವೆಚ್ಚವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು..
2023-24 ನೇ ಸಾಲಿನಲ್ಲಿ ಎಸ್.ಸಿ.ಎಸ್.ಪಿ. / ಟಿ.ಎಸ್.ಪಿ. ಅಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ 5790.67 ಕೋಟಿ , ಇಂಧನ ಇಲಾಖೆಗೆ 5400.98 ಕೋಟಿ ರೂ., ಕಂದಾಯ ಇಲಾಖೆಗೆ 4041.78 ಕೋಟಿ ರೂ., ಪರಿಶಿಷ್ಟ ಜಾತಿ ಕಲ್ಯಾಣಕ್ಕೆ 3787.29 ಕೋಟಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ 2779.97 ಕೋಟಿ ರೂ., ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಲಾಖೆಗೆ 2349.85 ಕೋಟಿ ರೂ., ವಸತಿ ಇಲಾಖೆಗೆ 1431.5 ಕೋಟಿ ರೂ., ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ 1387.35 ಕೋಟಿ ರೂ., ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ 1296.96 ಕೋಟಿ ರೂ., ಆರೋಗ್ಯ ಇಲಾಖೆಗೆ 1122.25 ಕೋಟಿ ರೂ. ಹಂಚಿಕೆ ಮಾಡಲಾಗಿದೆ.
ಮುಂದುವರೆದ ಯೋಜನೆಗಳಿಗೆ 1897 ಕೋಟಿ ರೂ. ಈ ವರೆಗೆ ವೆಚ್ಚ ಮಾಡಲಾಗಿದೆ. ಮುಂದಿನ ಎಂಟು ತಿಂಗಳಲ್ಲಿ ಇಂದು ಅನುಮೋದಿಸಲಾದ ಕ್ರಿಯಾ ಯೋಜನೆಯನ್ವಯ ಯೋಜನೆ ಅನುಷ್ಠಾನ ಮಾಡಿ, 34293.69 ಕೋಟಿ ರೂ. ಅನುದಾನ ಸಂಪೂರ್ಣ ವೆಚ್ಚ ಮಾಡಬೇಕು ಎಂದು ಸೂಚಿಸಲಾಯಿತು.
ದಲಿತರಿಗೆ ಎಲ್ಲೆಲ್ಲಿ ರುದ್ರಭೂಮಿ ಬೇಡಿಕೆ ಇದೆಯೊ ಅಲ್ಲಿ ರುದ್ರಭೂಮಿ ಒದಗಿಸಬೇಕು. ಹಾಸ್ಟೆಲ್ ಮತ್ತು ವಸತಿ ಶಾಲೆಗಳಿಗೆ ಆದ್ಯತೆ ಮೇರೆಗೆ ಜಾಗ ಒದಗಿಸುವಂತೆ ಜಿಲ್ಲೆಧಿಕಾರಿಗಳಿಗೆ ಪತ್ರ ಬರೆಯಲು ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಯಿತು. ಸಭೆಯಲ್ಲಿ ರಾಜ್ಯ ಅಭಿವೃದ್ಧಿ ಪರಿಷತ್ತಿನ ಉಪಾಧ್ಯಕ್ಷ ಹಾಗೂ ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ ಮಹದೇವಪ್ಪ, ಸದಸ್ಯರಾದ ಸಚಿವರುಗಳಾದ ನಾಗೇಂದ್ರ, ಹೆಚ್.ಕೆ. ಪಾಟೀಲ, ಪ್ರಿಯಾಂಕ್ ಖರ್ಗೆ, ಎಂ.ಸಿ. ಸುಧಾಕರ್, ರಾಜ್ಯ ಸಭಾ ಸದಸ್ಯ ಡಾ.ಎಲ್ ಹನುಮಂತಯ್ಯ, ಶಾಸಕರಾದ ಪಿ.ಎಂ. ನರೇಂದ್ರ ಸ್ವಾಮಿ, ಪ್ರಸಾದ ಅಬ್ಬಯ್ಯ, ಇ. ತುಕಾರಾಂ, ಪ್ರಕಾಶ ರಾಥೋಡ್, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.