ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಪೂರೈಸಲು ಸತತ ಪ್ರಯತ್ನಗಳು ನಡೆಯುತ್ತಿವೆ. ಇನ್ನೂ ಒಂದು ತಿಂಗಳು ಅಕ್ಕಿ ಬದಲಿಗೆ ನೇರ ನಗದು ವರ್ಗಾವಣೆ ಮೂಲಕ ಹಣವನ್ನೇ ಪಾವತಿಸಬೇಕಾಗುತ್ತದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಡಿತರ ಚೀಟಿದಾರ ರಿಗೆ ಅಕ್ಕಿ ನೀಡಲು ರಾಜ್ಯಸರ್ಕಾರ ಪ್ರಯತ್ನ ಮುಂದುವರೆಸಿದೆ. ಕೇಂದ್ರ ಸರ್ಕಾರದ ಮಾದರಿಯಲ್ಲಿ ಅಕ್ಕಿ ಖರೀದಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳೊಂದಿಗೆ ಮತ್ತೊಮ್ಮೆ ಸಮಾಲೋಚನೆ ನಡೆಸಲಾಗುತ್ತಿದೆ. ಮುಕ್ತ ಟೆಂಡರ್ ಕರೆದು ಅಕ್ಕಿ ಖರೀದಿಸಲು ನಿರ್ಧರಿಸಲಾಗಿದೆ. ಪ್ರತೀ ಹಂತದಲ್ಲೂ ರಾಷ್ಟ್ರ ಮಟ್ಟದ ಮಾನದಂಡಗಳನ್ನೇ ಅನುಸರಿಸಿ ಪಾರದರ್ಶಕತೆ ಪಾಲನೆ ಮಾಡಲಾಗುವುದು ಎಂದರು.
ಕೇಂದ್ರ ಸರ್ಕಾರ ಅಕ್ಕಿ ನೀಡದೇ ಇರುವುದರಿಂದ ಆಗಸ್ಟ್ ತಿಂಗಳಿನಲ್ಲಿಯೂ ಕೂಡ ಹಣವನ್ನೇ ನೀಡಬೇಕಾದ ಪರಿಸ್ಥಿತಿ ಇದೆ. ಜುಲೈ ತಿಂಗಳ ಪಡಿತರದ ಬದಲು ಫಲಾನುಭವಿಗಳಿಗೆ ಹಣ ಹಾಕಲಾಗಿದೆ. ನಾಳೆಯೊಳಗೆ ರಾಜ್ಯಾದ್ಯಂತ ಸುಮಾರು 1 ಕೋಟಿ ಪಡಿತರ ಚೀಟಿದಾರರಿಗೆ ನೇರ ನಗದು ವರ್ಗಾವಣೆಯಾಗಲಿದೆ. ಇದು 3.45 ಕೋಟಿ ಜನರಿಗೆ ಅನುಕೂಲವಾಗಿದೆ. ಸರ್ಕಾರದ ಬೊಕ್ಕಸದಿಂದ 566 ಕೋಟಿ ರೂ.ಗಳನ್ನು ಪಾವತಿಸಲಾಗಿದೆ ಎಂದು ತಿಳಿಸಿದರು