ಗದಗ : ಜಿಲ್ಲಾದ್ಯಂತ ಮಳೆ ಪ್ರಮಾಣ ನಿರಂತರವಾಗಿ ಸಾಗಿದ್ದು ಜನ ಜಾನುವಾರು ಜೀವ ರಕ್ಷಣೆಗೆ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು. ಹಾನಿಗೀಡಾದ ಮನೆಗಳನ್ನು 48 ಗಂಟೆಗಳಲ್ಲಿ ಸರ್ವೆ ಕಾರ್ಯ ಪೂರ್ಣಗೊಳಿಸಿ ಪರಿಹಾರ ನೀಡಲು ಕ್ರಮ ವಹಿಸಬೇಕೆಂದು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ತಿಳಿಸಿದ್ದಾರೆ.
ಅವರು ಬುಧವಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ವಿಡಿಯೋ ಸಂವಾದ ಸಭೆಯಲ್ಲಿ ಮುಂಗಾರು ಮಳೆಯಿಂದ ರಾಜ್ಯದಲ್ಲಿ ಸಂಭವಿಸಿರುವ ಹಾನಿಯ ಬಗ್ಗೆ ನಡೆದ ಸಭೆಯ ನಂತರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.
ಎಲ್ಲತಹಶೀಲ್ದಾರರ ಕಾರ್ಯಾಲಯ, ತಾಲೂಕು ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳ ಕಾರ್ಯಾಲಯಗಳಲ್ಲಿ 24 X 7 ಕಂಟ್ರೋಲ್ ರೂಮ್‌ಗಳನ್ನು ತೆರೆದು ಸಿಬ್ಬಂದಿಗಳನ್ನು ನೇಮಕ ಮಾಡಿ ಕಾರ್ಯ ನಿರ್ವಹಿಸಬೇಕು. ನದಿ ಕಾಲುವೆ ಹಳ್ಳಗಳ ಪ್ರವಾಹಗಳಿಂದ ತೊಂದರೆಗೊಳಗಾಗುವ ಪ್ರದೇಶದಲ್ಲಿ ಜನ ಜಾನುವಾರುಗಳ ಸಂಚಾರ ಮಾಡದಂತೆ ಡಂಗುರ ಮೂಲಕ ಸಾರ್ವಜನಿಕರಿಗೆ ತಿಳುವಳಿಕೆ ನೀಡಬೇಕು. ಅಗತ್ಯವಿದ್ದಲ್ಲಿ ಕಾಳಜಿ ಕೇಂದ್ರ ತೆರೆದು ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸೂಚಿಸಿದ್ದಾರೆ.
ಸಾರ್ವಜನಿಕರು ಸಂಚರಿಸುವ ಸ್ಥಳಗಳಲ್ಲಿ ನದಿ ಕಾಲುವೆಗಳಿಂದ ನೀರು ತುಂಬಿ ಹರಿದು ಬ್ರಿಡ್ಸ್ ಹಾಗೂ ರಸ್ತೆಗಳ ಸಂಚಾರಕ್ಕೆ ತೊಂದರೆಯಾದಲ್ಲಿ ಅಂತಹ ಸ್ಥಳಗಳಲ್ಲಿ ಬ್ಯಾರಿಕೇಡ್ ಹಾಗೂ ಎಚ್ಚರಿಕೆಯ ಫಲಕಗಳನ್ನು ಅಳವಡಿಸಬೇಕು. ಸಂಚಾರ ಮಾರ್ಗ ಬದಲಾವಣೆ ಮಾಡಬೇಕು. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಗಟಾರ, ಕಾಲುವೆ, ಚರಂಡಿಗಳಲ್ಲಿ ತುಂಬಿರುವ ಕಸ ಪ್ಲಾಸ್ಟಿಕ್‌ಗಳನ್ನು ತೆಗೆದು ಮಳೆ ನೀರು ಸರಾಗವಾಗಿ ಮುಂದೆ ಸಾಗಲು ಕ್ರಮ ವಹಿಸಬೇಕು. ಅತೀವೃಷ್ಟಿ ಪ್ರವಾಹದಿಂದ ಬೆಳೆ ಹಾನಿಯಾದಲ್ಲಿ ಜಂಟಿ ಸರ್ವೇ ನಡೆಸಿ ಸಮುಚಿತ ಮಾರ್ಗದಡಿ ವರದಿ ಸಲ್ಲಿಸಬೇಕು. ಈ ಬಗ್ಗೆ ಸಂಬಂಧಿತ ಇಲಾಖೆ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ ಅತೀವೃಷ್ಠಿ, ಪ್ರವಾಹದಿಂದ ಯಾವುದೇ ಅವಘಡಗಳು ನಡೆಯದಂತೆ ಮುಂಜಾಗ್ರತೆ ವಹಿಸಬೇಕು. ಈ ನಿಟ್ಟಿನಲ್ಲಿ ಕಂದಾಯ ಇಲಾಖೆ, ಪಂಚಾಯತ್ ಇಲಾಖೆ, ಪೊಲೀಸ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಅಧಿಕಾರಿಗಳು ನಿರಂತರ ನಿಗಾ ವಹಿಸಬೇಕು. ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ನಿಯೋಜಿತ ಅಧಿಕಾರಿಗಳು ನಿರಂತರ ಮೇಲಾಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು ಪರಿಸ್ಥಿತಿ ಸಮರ್ಪಕವಾಗಿ ನಿಭಾಯಿಸಬೇಕು. ಎಲ್ಲ ಅಧಿಕಾರಿ ನೌಕರರು ಕೇಂದ್ರ ಸ್ಥಾನದಲ್ಲಿದ್ದು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದ್ದಾರೆ.
ಮಳೆ ಹಾಗೂ ಮನೆ ಹಾನಿ ವಿವರ:
ಜುಲೈ 1 ರಿಂದ ಈವರೆಗೆ ಜಿಲ್ಲೆಯಲ್ಲಿ 117 ಮೀ.ಮೀ. ಮಳೆಯಾಗಿದ್ದು ವಾಡಿಕೆ ಮಳೆ 59 ಮೀ.ಮೀ ಇದ್ದು ಶೇ.100 ರಷ್ಟು ಹೆಚ್ಚಿಗೆ ಮಳೆಯಾಗಿದೆ. ಮಳೆಯಿಂದಾಗಿ ಜಿಲ್ಲೆಯಲ್ಲಿ 121 ಮನೆಗಳು ಭಾಗಶ: ಹಾನಿಗಿಡಾಗಿವೆ. ತಾಲೂಕಾವಾರು ವಿವರ : ಗದಗ-45, ಗಜೇಂದ್ರಗಡ-11, ಲಕ್ಷ್ಮೇಶ್ವರ-25, ಮುಂಡರಗಿ-5, ನರಗುಂದ-13, ರೋಣ-4, ಶಿರಹಟ್ಟಿ-18.
ಜಲಾಶಯ ಮಟ್ಟ:
ನವೀಲು ತೀರ್ಥ ಜಲಾಶಯ 37.785 ಟಿ.ಎಂ.ಸಿ. ಸಾಮರ್ಥ್ಯ ಹೊಂದಿದ್ದು ಈವರೆಗೆ 17.220 ಟಿ.ಎಂ.ಸಿ. ನೀರು ಸಂಗ್ರಹವಾಗಿದೆ. ನೀರಿನ ಒಳ ಹರಿವು 16930 ಕ್ಯೂಸೆಕ್ಸ ಇದ್ದು ಹೊರ ಹರಿವು 194 ಕ್ಯೂಸೆಕ್ಸ ಇದೆ. ಭದ್ರಾ ಜಲಾಶಯ 71.535 ಟಿ.ಎಂ.ಸಿ. ಸಾಮರ್ಥ್ಯ ಹೊಂದಿದ್ದು ಈ ವರೆಗೆ 36.901 ಟಿ.ಎಂ.ಸಿ. ನೀರು ಸಂಗ್ರಹವಾಗಿದ್ದು ನೀರಿನ ಒಳ ಹರಿವು 28296 ಕ್ಯೂಸೆಕ್ಸ ಇದ್ದು ಹೊರ ಹರಿವು 183 ಕ್ಯೂಸೆಕ್ಸ ಇದೆ.