ಕರ್ನೂಲ್: ಪಕ್ಕ ರಾಜ್ಯ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ವಜ್ರಕರೂರ ಮತ್ತು ಪೆತ್ತಿಕೊಂಡ ಮಂಡಲದ ಹಳ್ಳಿಗಳಲ್ಲಿ ಮಳೆ ಬಂದರೆ ಹೊಲದಲ್ಲಿ ವಜ್ರದ ಹರಳು ಹುಡುಕಾಟ ಶುರುವಾಗಲಿದೆ.
ಪ್ರತಿ ವರ್ಷ ಜುಲೈ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ವಜ್ರದಂತಹ ಹರಳು ಮಳೆ ಬಂದಾಗ ಬೀಳುತ್ತಿದ್ದು, ರೈತರು ಈ ಹರಳುಗಳಿಗಾಗಿ ಹುಡುಕಾಟ ನಡೆಸಿದ್ದು, ಕೆಲವರಿಗೆ ಲಕ್ಷಾಂತರ ರೂ. ಬೆಲೆ ಬಾಳುವ ವಜ್ರಗಳು ದೊರೆತಿವೆ.
ಯಾವ್ಯಾವ ಭಾಗದಲ್ಲಿ ಹುಡುಕಾಟ:
ಕರ್ನೂಲ್ ಜಿಲ್ಲೆಯ ವಜ್ರಕರೂರು ಮಂಡಲದ ವಜ್ರಕರೂರು, ತುಗ್ಗಲಿ, ಜೊನ್ನಾಗಿರಿ, ಮಡ್ಡಿಕೇರಾ, ಬಾಸಿನೇಪಲ್ಲಿ, ಪತ್ತಿಕೊಂಡ ಮಂಡಲದ ಚೆನ್ನಗಿರಿ, ಯಾಪಲಿ, ಮದ್ದಿಕೇರಿ ಸೇರಿದಂತೆ ಸುತ್ತಲ ಹಳ್ಳಿಗಳಲ್ಲಿ ಮಳೆ ಬಂದರೆ ಸಾಕು ಹೊಲದಲ್ಲಿ ರೈತರು, ಕೃಷಿ ಕೂಲಿಕಾರ್ಮಿಕರು ವಜ್ರಕ್ಕಾಗಿ ಹುಡುಕಾಟ ನಡೆಸುತ್ತಾರೆ. ಕೆಲವು ರೈತರಿಗೆ 30 ರಿಂದ 40 ವಜ್ರಗಳು ದೊರೆತಿದ್ದು, ಜೊನ್ನಗಿರಿ ರೈತರೊಬ್ಬರಿಗೆ ದೊರೆತ ವಜ್ರ 10 ಲಕ್ಷ ರೂ.ಗೆ ಮಾರಾಟವಾಗಿದೆ. ಹೀಗಾಗಿ ಗ್ರಾಮಗಳ ಜಮೀನುಗಳನ್ನು ಅಕ್ಕಪಕ್ಕದ ಜಿಲ್ಲೆಗಳ ರೈತರು ಲೀಜಿಗೆ ಪಡೆದು ಮಳೆ ಬಂದಾಗ ವಜ್ರಕ್ಕಾಗಿ ಹುಡುಕಾಟ ನಡೆಸುತ್ತಾರೆ. ಜತೆಗೆ ಕೂಲಿ ನೀಡಿ ವಜ್ರ ಹುಡುಕಾಟಕ್ಕೆ ಕಾರ್ಮಿಕರನ್ನು ನೇಮಿಸುತ್ತಾರೆ.
ಮಳೆ ಬಂದಾಗ ವಜ್ರ ಪತ್ತೆ:
ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ರಾಯಲ ಸೀಮಾದಲ್ಲಿ ವಜ್ರಗಳ ಮಾರುಕಟ್ಟೆ ಇತ್ತು. ರಸ್ತೆ ಪಕ್ಕದಲ್ಲಿಟ್ಟು ವಜ್ರ, ವೈಢೂರ್ಯಗಳನ್ನು ಮಾರಾಟ ಮಾಡಲಾಗುತ್ತಿತ್ತು. ಆಗಿನ ವಜ್ರಗಳು ಇಂದಿಗೂ ಭೂಮಿಯಲ್ಲಿದ್ದು, ಮಳೆ ಬಂದಾಗ ಮಾತ್ರ ಮನುಷ್ಯನ ಕಣ್ಣಿಗೆ ಗೋಚರವಾಗುತ್ತವೆ ಎನ್ನುವುದು ಅಲ್ಲಿನ ಜನರ ನಂಬಿಕೆಯಾಗಿದೆ.
ಅದಕ್ಕೆ ತಕ್ಕಂತೆ ಜುಲೈ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸುರಿಯುವ ಮಳೆಯ ಸಂದರ್ಭದಲ್ಲಿ ಮಾತ್ರ ಈ ವಜ್ರಗಳು ಜನರಿಗೆ ದೊರೆಯುತ್ತವೆ. ಪೊಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಕೆಲವರಿಂದ ವಜ್ರಗಳನ್ನು ವಶಪಡಿಸಿಕೊಂಡಿರುವ ಘಟನೆಗಳು ನಡೆದಿದ್ದರೂ ನಿರಂತರವಾಗಿ ವಜ್ರಕ್ಕಾಗಿ ಹುಡುಕಾಟ ನಾಲ್ಕೆದು ದಶಕಗಳಿಂದಲೂ ಮುಂದುವರಿದಿದೆ.