ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯದಂತೆ ಜನರ ಆಶೀರ್ವಾದದಿಂದ ಆರಿಸಿ ಬಂದ ಒಂದು ಸರ್ಕಾರ ಉಳ್ಳವರ ದನಿಯಾಗುವ ಬದಲು ಜನಸಾಮಾನ್ಯರ ದನಿಯಾಗಬೇಕು. ಬಡವರ ಕಲ್ಯಾಣ ಕಾರ್ಯಕ್ರಮಗಳು ಹಾಗೂ ಆರ್ಥಿಕತೆಯ ಬಲವರ್ಧನೆಗೆ ದಿಟ್ಟ ನಿರ್ಧಾರ ಕೈಗೊಂಡ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಹಸಿವು ಮುಕ್ತ ಕರ್ನಾಟಕ ದೆಡೆಗೆ ದಾಪುಗಾಲು ಇಟ್ಟಿದೆ.
ಜನಸಾಮಾನ್ಯರ ನೆಮ್ಮದಿಯ ಬದುಕಿಗೆ ಅನ್ನಭಾಗ್ಯದಂತಹ ಯೋಜನೆಗಳನ್ನು ಅನುಷ್ಠಾನಗೊಳಿಸಿ ಹಸಿವು ಮುಕ್ತ ಕರ್ನಾಟಕದ ಸಂಕಲ್ಪಕ್ಕೆ ಪಣತೊಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ ೧೦ ಕೆಜಿ ಅಕ್ಕಿ ನೀಡುವ ಗ್ಯಾರಂಟಿಯಿಂದ ಜನರನ್ನು ಸೋಮಾರಿ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಮೂರು ಹೊತ್ತು ಊಟ ಮಾಡುವವರಿಗೆ ಇದರ ಬೆಲೆ ಗೊತ್ತಾಗುವುದಿಲ್ಲ. ೧೦ ಕೆ.ಜಿ. ಅಕ್ಕಿ ಸಿಕ್ಕ ಕೂಡಲೇ ಯಾರೂ ಕೆಲಸ ಮಾಡದೇ ಕೂರುವುದು ಇಲ್ಲ. ಆಹಾರಧಾನ್ಯ ಒಂದರಿಂದಲೇ ಜೀವನ ಕೂಡ ಸಾಗುವುದಿಲ್ಲ. ಆಹಾರದಾನ್ಯ ಸಿಕ್ಕರೆ ಉದ್ಯೋಗ ಮಾಡುವುದಿಲ್ಲ ಎನ್ನುವುದಾದರೆ ಉಳ್ಳವರೆಲ್ಲರೂ ಕೆಲಸ ಮಾಡದೇ ಕೂರಬೇಕಾಗಿತ್ತು. ಇದು ಹಸಿದವರ ಹೊಟ್ಟೆ ತುಂಬಿಸಲು ಸರ್ಕಾರ ಮಾಡುತ್ತಿರುವ ನೆರವು ಇದಾಗಿದೆ.
ಸರ್ಕಾರದ ಯೋಜನೆಗಳು ಉಳ್ಳವರನ್ನು ಓಲೈಸುವುದನ್ನು ಬಿಟ್ಟು ತಳಸಮುದಾಯದವನ್ನು, ಹಸಿದವರನ್ನು, ರಟ್ಟೆ ಬತ್ತುವಂತೆ ದುಡಿದವರನ್ನು ಪೊರೆಯುವ ಕೆಲಸ ಮಾಡಿದಾಗ ಇಂತಹ ಪ್ರತಿಕ್ರಿಯೆಗಳು ಬರುತ್ತವೆ. ಅನ್ನಭಾಗ್ಯ ಇಂತಹ ಯೋಜನೆಗಳನ್ನು ದುಡ್ಡಿನ ತಕ್ಕಡಿಯಲ್ಲಿಟ್ಟು ತೂಗಿ ನೋಡುವವರು ಸಾಮಾಜಿಕ ಸಮಾನತೆಯನ್ನೇ ಅವಮಾನಿಸುವವರು. ಈ ಎಲ್ಲ ಹಿನ್ನೆಲೆಯಲ್ಲಿ ನೋಡಿದರೆ ಇತ್ತೀಚಿನ ಇತಿಹಾಸದಲ್ಲಿ, ಈಗಿನ ರಾಜಕೀಯ ವಿದ್ಯಮಾನಗಳಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ನಿಲುವು ಐತಿಹಾಸಿಕ ನಡೆಯೇ ಆಗಿದೆ.
ಹಸಿವು ನಿಗಿಸಿದ ಅನ್ನಭಾಗ್ಯ: ಮಕ್ಕಳಿಗೆ ಜ್ವರ ಬಂದಾಗ ಅವರ ತಾಯಂದಿರು ಒಂದು ತುತ್ತು ಅನ್ನಕ್ಕಾಗಿ ಮಾಡುತ್ತಿರುವ ಒದ್ದಾಟವನ್ನು ಕಣ್ಣಾರೆ ಕಂಡಿದ್ದೇನೆ. ಸಿದ್ಧರಾಮನಹುಂಡಿಯಲ್ಲಿ ಇಂತಹ ಜೀವನಗಳನ್ನು ನೋಡುತ್ತಲೇ ಬೆಳೆದವನು ನಾನು ಎಂದು ಸನ್ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅನೇಕ ಬಾರಿ ಹೇಳಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಮನೆಗಳ ಆರ್ಥಿಕ ಸ್ಥಿತಿಯಲ್ಲಿಯೂ ಚೇತರಿಕೆ ಕಾಣಲು ಇದು ಸಹಕಾರಿಯಾಗಿದೆ ಎಂಬುದರಲ್ಲಿ ಬೇರೆ ಮಾತಿಲ್ಲ. ಹತ್ತು ಕೆಜಿ ಅಕ್ಕಿ ಉಳ್ಳವರ ಪಾಲಿಗೆ ತೀರಾ ಸಣ್ಣದಾಗಿ ಕಾಣಿಸಬಹುದು. ಆದರೆ ಅದಕ್ಕೆ ಲಕ್ಷಾಂತರ ಕುಟುಂಬಗಳ ಕಣ್ಣೀರು ಒರೆಸುವ ತಾಕತ್ತಿದೆ.
ನಾವು ಯೋಜನೆಗಾಗಿ ಎಷ್ಟು ಅನುದಾನವನ್ನು ಖರ್ಚು ಮಾಡುತ್ತೇವೆ ಎನ್ನುವುದಕ್ಕಿಂತ ಯಾರಿಗಾಗಿ ಆ ಹಣವನ್ನು ವಿನಿಯೋಗ ಮಾಡುತ್ತಿದ್ದೇವೆ ಎನ್ನುವುದು ಮುಖ್ಯ. ಈ ಹೊತ್ತಿನಲ್ಲಿ ನೂರು ಟೀಕೆಗಳು ಎದುರಾದರೂ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಗುರಿ ಸಾದನೆಯೆಡೆಗೆ ದೃಢ ಹೆಜ್ಜೆ ಹಾಕುತ್ತಿರುವದು ಮುಖ್ಯಮಂತ್ರಿ ಸಿದ್ಧರಾಮಯ್ಯ ನವರ ನೇತೃತ್ವದ ಸರ್ಕಾರ.
ಅಕ್ಕಿ ಬದಲು ಧನಭಾಗ್ಯ : ಹಸಿವು ಮುಕ್ತ ಕರ್ನಾಟಕ ಪರಿಕಲ್ಪನೆಯಡಿ ಅನುಷ್ಟಾನಕ್ಕೆ ಬಂದಿರುವ ಅನ್ನಭಾಗ್ಯ ಯೋಜನೆಯಲ್ಲಿ ಬಿಪಿಎಲ್ ಕಾರ್ಡದಾರರಿಗೆ ಅಕ್ಕಿ ಬದಲು ನೇರ ನಗದು ವರ್ಗಾವಣೆ ವ್ಯವಸ್ಥೆಗೆ ಜುಲೈ ೧೪ ರಂದು ವಿಧಾನಸೌಧ ಸಮ್ಮೆಳನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಯೋಜನೆಯಡಿ ನೇರ ನಗದು ವರ್ಗಾವಣೆ ವ್ಯವಸ್ಥೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಲನೆ ನೀಡಿದರು.
ತಾತ್ಕಾಲಿಕ ವ್ಯವಸ್ಥೆ : ಅಕ್ಕಿ ಸಿಗುವ ತನಕ ಕಾರ್ಡದಾರರಿಗೆ ಹಣ ನೀಡಲಾಗುವುದು. ಸರ್ಕಾರ ನೀಡುವ ಹಣವನ್ನು ಫಲಾನುಭವಿಗಳು ದುರ್ಬಳಕೆ ಮಾಡಿಕೊಳ್ಳದೇ ಅಕ್ಕಿಯನ್ನು ಖರೀದಿಸಬೇಕು. ಅನ್ನಭಾಗ್ಯ ಯೋಜನೆ ಬಗ್ಗೆ ಅನ್ಯರು ಬೇರೆ ರೀತಿಯಲ್ಲಿ ವ್ಯಾಖ್ಯಾನ ಮಾಡಿದರೂ ಜನರು ಬಹಳ ಖುಷಿಯಾಗಿದ್ದಾರೆ. ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಳ್ಳುವ ರೀತಿ ಜನಸಾಮಾನ್ಯರಲ್ಲಿ ಹೊಸ ಹುರುಪು ತಂದಿದೆ.
ಅನ್ನಭಾಗ್ಯ ಯೋಜನೆಗೆ ವಾರ್ಷಿಕ ೧೦ ಸಾವಿರ ಕೋಟಿ ರೂ.ವೆಚ್ಚವಾಗಲಿದೆ. ಐದು ಗ್ಯಾರಂಟಿಗಳಿಗೆ ೫೭ ಸಾವಿರ ಕೋಟಿ ರೂ. ಬೇಕಾಗುತ್ತದೆ. ಇದಕ್ಕೆ ಬಜೆಟ್‌ನಲ್ಲಿ ಭದ್ರ ಅಡಿಪಾಯ ಹಾಕಲಾಗಿದೆ. ಅನ್ನಭಾಗ್ಯದಿಂದ ೧.೨೮ ಕೋಟಿ ಬಿಪಿಎಲ್, ೪೫ ಲಕ್ಷ ಅಂತ್ಯೋದಯ ಕುಟುಂಬಗಳು ಸೇರಿ ೪.೪೨ ಕೋಟಿ ಫಲಾನುಭವಿಗಳಿಗೆ ಲಾಭವಾಗಲಿದೆ.
ಮನಮೋಹನ್‌ಸಿಂಗ್ ಅವರು ಪ್ರಧಾನಮಂತ್ರಿಯಾಗಿದ್ದಾಗ ಆಹಾರ ಭಧ್ರತಾ ಕಾಯ್ದೆ ಅನುಷ್ಟಾನಕ್ಕೆ ತಂದರು. ಆಹಾರ ಹಕ್ಕು, ಮಾಹಿತಿ ಹಕ್ಕು, ಶಿಕ್ಷಣ ಹಕ್ಕು, ಉದ್ಯೋಗ ಹಕ್ಕು, ಯೋಜನೆಗಳನ್ನು ಜಾರಿಗೊಳಿಸಿದರು. ಅದರಂತೆ ೨೦೧೩ ರಲ್ಲಿ ಆಹಾರ ಹಕ್ಕು ಜಾರಿಗೆ ಬಂದಿತ್ತು. ಈಗ ಮೂಲಭೂತ ಹಕ್ಕು ಕೊಡಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ ಎಂದು ಸಿದ್ಧರಾಮಯ್ಯ ಹೆಮ್ಮೆಯಿಂದ ನುಡಿದಿದ್ದಾರೆ.
– ವಸಂತ. ಬಿ. ಮಡ್ಲೂರ, ವಾರ್ತಾಧಿಕಾರಿ, ಗದಗ.