ಗದಗ: ಬಡವರ ಕಲ್ಯಾಣಕ್ಕಾಗಿ ಘೋಷಿಸಲಾದ ಸರಕಾರದ ಪ್ರಮುಖ ಐದು ಗ್ಯಾರಂಟಿಗಳ ನೋಂದಣಿ ಕಾರ್ಯ ಜಿಲ್ಲೆಯಲ್ಲಿ ಶೀಘ್ರ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ರಾಜ್ಯ ಕಾನೂನು, ನ್ಯಾಯ ಹಾಗೂ ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲ ಅವರು ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಸರ್ಕಾರದ ಪ್ರಮುಖ ಐದು ಗ್ಯಾರಂಟಿಗಳು ಸಮಾಜದ ನಿರ್ಗತಿಕರ, ಕೆಳವರ್ಗದ ಕಲ್ಯಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಲಿವೆ.
ಶಕ್ತಿ ಯೋಜನೆ: ಶಕ್ತಿ ಯೋಜನೆಯು ಮಹಿಳೆಯರ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸುವ ಯೋಜನೆಯಾಗಿದ್ದು, ಜಿಲ್ಲೆಯಲ್ಲಿ ಈ ಮೊದಲು 1.75 ಲಕ್ಷ ಪ್ರಯಾಣಿಕರು ದಿನಂಪ್ರತಿ ಪ್ರಯಾಣಿಸುತ್ತಿದ್ದರು. ಯೋಜನೆ ಜಾರಿಯಾದಾಗಿನಿಂದ ದಿನಂಪ್ರತಿ ಸಂಚರಿಸುವವರ ಸಂಖ್ಯೆ 2.46 ಲಕ್ಷಕ್ಕೆ ಎರಿಕೆಯಾಗಿದೆ. ಲೋಡ್ ಫ್ಯಾಕ್ಟರ್ 76% ರಿಂದ 96% ಕ್ಕೆ ಏರಿಕೆಯಾಗಿದೆ. ಪ್ರತಿದಿನ 60 ಲಕ್ಷ ರೂ ಗಳಿಂದ 70 ಲಕ್ಷ ರೂ. ಸಂಗ್ರಹವಾಗುತ್ತಿದೆ. ಈ ಯೋಜನೆಯಿಂದ ಒಟ್ಟಾರೆ 2 ಕೋಟಿ ರೂ. ಆದಾಯ ಹೆಚ್ಚಳವಾಗಿದೆ ಎಂದರು.
ಗೃಹಜ್ಯೋತಿ: ಪ್ರತಿ ಮನೆಯ 200 ಯುನಿಟಗಳ ವರೆಗಿನ ಉಚಿತ ವಿದ್ಯುತ್ ಒದಗಿಸುವ ಯೋಜನೆ ಇದಾಗಿದ್ದು, ಜೂನ್ 18 ರಿಂದ ನೊಂದಣಿ ಕಾರ್ಯ ಆರಂಭವಾಗಿದೆ. ಜಿಲ್ಲೆಯಲ್ಲಿ ಒಟ್ಟು 3,15,756 ಸಂಪರ್ಕಗಳಿದ್ದು ಈ ಪೈಕಿ 25,805 ಸಂಪರ್ಕಗಳು ಡಿಫಾಲ್ಟ ಹಾಗೂ ಕಡಿತಗೊಂಡಿವೆ, 696 ಸಂಪರ್ಕಗಳು ಅನರ್ಹವಾಗಿದ್ದು, 2,89,207 ಸಂಪರ್ಕಗಳು ಗೃಹ ಜ್ಯೋತಿ ಯೋಜನೆಯ ವ್ಯಾಪ್ತಿಗೊಳಪಡುತ್ತವೆ. ಶನಿವಾರ ಸಂಜೆಯವರೆಗೆ 1,62,954 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದು, 1,26,080 ಗ್ರಾಹಕರು ನೋಂದಣಿ ಮಾಡಿಕೊಳ್ಳಬೇಕಿದೆ. ಈಗಾಗಲೇ ಶೇ. 56.30 ರಷ್ಟು ನೋಂದಣಿ ಕಾರ್ಯ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ 200 ಯುನಿಟಗಿಂತ ಅಧಿಕ ಬಳಕೆಮಾಡುತ್ತಿರುವವರ ಸಂಖ್ಯೆ 3,998 ಇದೆ. ಜೂನ 10ರೊಳಗಾಗಿ ನೊಂದಣಿಕಾರ್ಯ ಪೂರ್ಣಗೊಳಿಸಲು ಅಧಿಕಾರಿಗೆ ಸೂಚನೆ ನೀಡಲಾಗಿದೆ.
ಅನ್ನಭಾಗ್ಯ: ಅಂತ್ಯೋದಯ ಹಾಗೂ ಬಿ.ಪಿ.ಎಲ್ ಪಡಿತರ ಚೀಟಿ ಹೊಂದಿದ ಕುಟುಂಬದ ಸದಸ್ಯರಿಗೆ ಪ್ರತಿ ಮಾಹೆ 10 ಕೆ.ಜಿ. ಉಚಿತ ಅಕ್ಕಿ ಪೂರೈಸುವ ಯೋಜನೆ ಇದಾಗಿದೆ. ಜಿಲ್ಲೆಯಲ್ಲಿ 28,586 ಅಂತ್ಯೋದಯ ಪಡಿತರ ಚೀಟಿದಾರರು ಹಾಗೂ 2,27,914 ಬಿ.ಪಿ.ಎಲ್ ಪಡಿತರ ಚೀಟಿದಾರರಿದ್ದಾರೆ. ಪ್ರತಿ ಸದಸ್ಯರಿಗೆ ಹೆಚ್ಚುವರಿ 5 ಕೆ.ಜಿ.ಅಕ್ಕಿಗೆ ತಗಲುವ ಮೊತ್ತ 170 ರೂ ಗಳನ್ನು ನೇರವಾಗಿ ಪಡಿತರದಾರರಿಗೆ ಡಿ.ಬಿ.ಓ.ಟಿ ಮೂಲಕ ಪಾವತಿಸಲಾಗುವದು. ಬಿ.ಪಿ.ಎಲ್ ಪಡಿತರದಾರರಿಗೆ 12,27,23,680 ರೂ ಗಳು ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ 1,89,71,830 ರೂ. ಮೊತ್ತವನ್ನು ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಗೃಹಲಕ್ಷ್ಮೀ: ಜಿಲ್ಲೆಯ ಬಿಪಿಎಲ್ ಹಾಗೂ ಎಪಿಎಲ್ ಕುಟುಂಬಗಳ ಯಜಮಾನಿಯ ಖಾತೆಗೆ ಮಾಸಿಕ 2000 ರೂ. ನೇರ ವರ್ಗಾವಣೆ ಮಾಡುವ ಯೋಜನೆ ಇದಾಗಿದೆ. ಜಿಲ್ಲೆಯಲ್ಲಿ ಬಿ.ಪಿ.ಎಲ್ ಪಡಿತರದಾರರು 2.28 ಲಕ್ಷ ಕುಟುಂಗಳಿದ್ದು, ಅಂತ್ಯೋದಯ 28,623 ಪಡಿತರ ಚೀಟಿದಾರರು, ಎ.ಪಿ.ಎಲ್ 38,455 ಚೀಟಿದಾರರಿದ್ದು ಮನೆಯ ಯಜಮಾನಿಗೆ ಹಣ ವರ್ಗಾವಣೆ ಮಾಡಲು ಮಾಹಿತಿ ಸಂಗ್ರಹ ಕಾರ್ಯ ಪ್ರಗತಿಯಲ್ಲಿದೆ.
ಯುವನಿಧಿ: ನಿರುದ್ಯೋಗಿ ಪದವೀದರರಿಗೆ 3000 ರೂ. ನಿರುದ್ಯೋಗಿ ಡಿಪ್ಲೋಮಾ ಪದವಿದರರಿಗೆ 1500 ರೂ.ಗಳನ್ನು ನೀಡುವ ಯೋಜನೆ ಯುವ ನಿಧಿಯಾಗಿದೆ. ಈ ಹೋಜನೆ ಅನುಷ್ಠಾನ ಹಾಗೂ ನೊಂದಣಿಗೆ ಪ್ರಕ್ರಿಯೆಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಪ್ರಮುಖ ಐದು ಗ್ಯಾರಂಟಿಗಳ ಅನುಷ್ಠಾನದಲ್ಲಿ ಗದಗ ಜಿಲ್ಲೆ ಮುಂಚೂಣಿಯಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.