ಬೆಂಗಳೂರು: ರಾಜ್ಯದಲ್ಲಿ ಗೃಹ ಜ್ಯೋತಿ ಯೋಜನೆಗೆ ಕಳೆದ 10 ದಿನಗಳಲ್ಲಿ 7005892 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ.
ಜೂನ್ 27, ಮಂಗಳವಾರ ಸಂಜೆ 6 ಗಂಟೆಯ ವೇಳೆಗೆ ಬೆಸ್ಕಾಂ ವ್ಯಾಪ್ತಿಯಲ್ಲಿ 258263 ಗ್ರಾಹಕರು ನೋಂದಾಯಿಸಿದ್ದಾರೆ. ಇನ್ನೂ ಸೆಸ್ಕ್ – 98842, ಜೆಸ್ಕಾಂ – 63435, ಹೆಸ್ಕಾಂ – 119309, ಹುಕ್ಕೇರಿ (HRECS) – 2926, ಮೆಸ್ಕಾಂ – 76771 ಸೇರಿದಂತೆ ರಾಜ್ಯದ್ಯಂತ ಒಟ್ಟು 619546 ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ.
ರಾಜ್ಯದ ಒಟ್ಟು 6 ವಿದ್ಯುತ್ ನಿಗಮಗಳಲ್ಲಿ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸ್ವೀಕಾರ ಪ್ರಕ್ರಿಯೆ ವೇಗ ಪಡೆದಿರುವ ಹಿನ್ನೆಲೆಯಲ್ಲಿ ಪ್ರತಿ ನಿತ್ಯ ಕನಿಷ್ಠ 10 ಲಕ್ಷಕ್ಕೂ ಹೆಚ್ಚು ಗ್ರಾಹಕರು ಅರ್ಜಿ ಸಲ್ಲಿಸಲು ಮುಂದಾಗುತ್ತಿದ್ದಾರೆ. ಇನ್ನೂ ಗೃಹ ಜ್ಯೋತಿ ನಿಯಮದನ್ವಯ ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಅನ್ವಯ. ವಾಣಿಜ್ಯ ಉದ್ದೇಶಕ್ಕೆ ವಿದ್ಯುತ್ ಉಪಯೋಗಿಸಿದ್ದಲ್ಲಿ ಯೋಜನೆ ಅನ್ವಯವಾಗುವುದಿಲ್ಲ.
ರಾಜ್ಯದ ಇ-ಆಡಳಿತ ಗೃಹ ಜ್ಯೋತಿ ಯೋಜನೆಗೆ ಪ್ರತ್ಯೇಕವಾಗಿ ನೋಂದಣಿ ಲಿಂಕ್ ನೀಡಿದ ಬಳಿಕ ಅರ್ಜಿ ಸಲ್ಲಿಕೆಯು ದುಪ್ಪಟ್ಟಾಗಿದೆ. ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿಲ್ಲದೆ ವಿದ್ಯುತ್ ಕಛೇರಿ, ನಾಡಕಛೇರಿ ಹಾಗೂ ಕಂಪ್ಯೂಟರ್, ಲ್ಯಾಪ್’ಟಾಪ್, ಮೊಬೈಲ್ ಫೋನ್ ನಲ್ಲಿ ಅಧಿಕೃತ ಪೋರ್ಟಲ್ https://sevasindhugs.karnataka.gov.in ಮೂಲಕ ನೋಂದಾಯಿಸಬಹುದು. ಮೇಲ್ಕಂಡ ವೆಬ್ಸೈಟ್ ಹೊರತುಪಡಿಸಿ, ನೋಂದಣಿಗೆ ಯಾವುದೇ ಖಾಸಗಿ/ನಕಲಿ ವೆಬ್ಸೈಟ್ ಬಳಸದೇ ಇರುವುದು ಸೂಕ್ತ.
ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ನೋಂದಣಿಗೆ ನಿಗದಿತ ಸೇವಾ ಶುಲ್ಕವನ್ನಷ್ಟೇ ಪಾವತಿಸಿ ನೋಂದಾಯಿಸಿಕೊಳ್ಳಬಹುದು. ಹೆಚ್ಚುವರಿ ಹಣಕ್ಕೆ ಯಾರಾದರೂ ಬೇಡಿಕೆಯಿಟ್ಟಲ್ಲಿ, ಗ್ರಾಹಕರು ಕೂಡಲೇ 24×7 ಸಹಾಯವಾಣಿ 1912 ಕ್ಕೆ ಕರೆಮಾಡಿ ತಿಳಿಸಬಹುದು. ಅಂತಹ ಪ್ರಯತ್ನಗಳ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.