ಬೆಂಗಳೂರು: ಶಾಲಾ ಬ್ಯಾಗ್ ಹೊರೆ ತಗ್ಗಿಸಲು ಕ್ರಮ ವಹಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಹಳೇ ವರದಿಯ ಪ್ರಕಾರವೇ ಬ್ಯಾಗ್ ತೂಕ ನಿಗದಿ ಮಾಡಬೇಕೆಂದು ಶಾಲೆಗಳಿಗೆ ಸೂಚನೆ ನೀಡಿದೆ.
1ರಿಂದ 10ನೇ ತರಗತಿಯವರೆಗೆ ಶಾಲಾ ಬ್ಯಾಗ್ ತೂಕ ನಿಗದಿ ಮಾಡಿದೆ. ಆ ಪ್ರಕಾರವಾಗಿ 1ರಿಂದ 2ನೇ ತರಗತಿಗೆ 1.5 ರಿಂದ 2 ಕೆ.ಜಿ. ಹಾಗೂ ಅಂತಿಮವಾಗಿ 9ರಿಂದ 10ನೇ ತರಗತಿಗೆ 4ರಿಂದ 5 ಕೆ.ಜಿ. ನಿಗದಿ ಮಾಡಿದೆ. ‘ಎನ್ಎಲ್ಎಸ್ಯುಐ’ ಮಗು ಮತ್ತು ಕಾನೂನು ಕೇಂದ್ರ ನಿಗದಿಪಡಿಸಿರುವ ಬ್ಯಾಗ್ ತೂಕದ ವರದಿ ಆಧರಿಸಿ ಸುತ್ತೋಲೆ ಹೊರಡಿಸಲಾಗಿದೆ.
ಅತಿಯಾದ ಹೊರೆ ಇರುವ ಶಾಲಾ ಬ್ಯಾಗ್ನಿಂದ ಉಂಟಾಗಬಹುದಾದ ದುಷ್ಪಪರಿಣಾಮಗಳ ಬಗ್ಗೆ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕು. ಬ್ಯಾಗ್ ತೂಕದ ಅನುಷ್ಠಾನ ಕುರಿತು ಅಧಿಕಾರಿಗಳು ಉಸ್ತುವಾರಿ ವಹಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಶಾಲಾ ಬ್ಯಾಗ್ ತೂಕ ಎಷ್ಟಿರಬೇಕು?
1 ಮತ್ತು 2 ನೇ ತರಗತಿ- 1.5- 2 ಕೆ.ಜಿ
3 ರಿಂದ 5 ನೇ ತರಗತಿ- 2-3 ಕೆ.ಜಿ
6 ರಿಂದ 8 ನೇ ತರಗತಿ- 3-4 ಕೆ.ಜಿ
9 ರಿಂದ 10 ನೇ ತರಗತಿ- 4-5 ಕೆ.ಜಿ.